ಮಡಿಕೇರಿ, ಮಾ. 8: ಕುಸಿಯುತ್ತಿರುವ ಧಾರ್ಮಿಕ ಮೌಲ್ಯ ವೃದ್ಧಿಸಲು, ದೈವತ್ವದ ಮಹಿಮೆಯ ಅರಿವು ಮೂಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಇಲ್ಲಿ ವಿಚಾರ ಗೋಷ್ಠಿ ಏರ್ಪಡಿಸಿತ್ತು. ಸಕಲ ಧರ್ಮದ ಪ್ರತಿನಿಧಿಗಳು ದೇವನೊಬ್ಬ-ನಾಮ ಹಲವು ಎಂಬ ಉಕ್ತಿಗೆ ಒತ್ತು ನೀಡಿ ಮಾತನಾಡಿದರು.ಶಾಂತಿ ದೇವಾಲಯದ ಧರ್ಮಗುರು ಸುಧೀರ್ ರೋಬಿನ್ಸನ್ ಆನಂದ್ ಅವರು ಮಾತನಾಡಿ, ಸುಂದರ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಅಗತ್ಯ ಎಂದರು. ಕಣ್ಣೆದುರು ಕಾಣುವವರನ್ನು ಪ್ರೀತಿಸಲು ಕಲಿತರೆ ಮಾತ್ರ ಕಾಣದ ದೇವರನ್ನು ಪ್ರೀತಿಸಲು ಸಾಧ್ಯ ಎಂದರು.

ಇಸ್ಕಾನ್ ಅಧ್ಯಕ್ಷ ಸುಧೀರ್ ಚೈತನ್ಯ ದಾಸ್ ಮಾತನಾಡಿ ಧರ್ಮ ಎಂಬ ಶಬ್ಧ ಇಂದು ಅರ್ಥ ಕಳೆದುಕೊಳ್ಳುತ್ತಿದೆ ಎಂದರು. ತಪೋಭೂಮಿ ಭಾರತದಲ್ಲಿ ಇಂದು ಇಂದ್ರಿಯ ಭೋಗಕ್ಕೆ ಹೆಚ್ಚು ಒತ್ತು ನೀಡುತ್ತಿರುವದು ಅಪಾಯಕಾರಿ ಎಂದರು. ದೇಹಭಾವದಿಂದ ದೈವಭಾವಕ್ಕೆ ಬದಲಾಗೋಣ ಎಂದು ಕರೆ ನೀಡಿದರು.

(ಮೊದಲ ಪುಟದಿಂದ) ಧರ್ಮದ ಅನುಕರಣೆ ಜೀವನದಲ್ಲಿ ಶಿಸ್ತು ತರುತ್ತದೆ ಎಂದು ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು. ಒಂದೇ ದಿನ ರಂಜಾನ್ ಜೊತೆಯಲ್ಲೇ ಗಣೇಶ ಚತುರ್ಥಿ ಆಚರಿಸುವ ಸಂಸ್ಕøತಿ ಭಾರತದಲ್ಲಿ ಮಾತ್ರ ಇರುವದೆಂದರು.

ಜಮಾಅತೆ ಇಸ್ಲಾಮಿ ಹಿಂದ್‍ನ ರಾಜ್ಯ ಸಂಚಾಲಕ ಮಹಮ್ಮದ್ ಕುಂಞ ಮಾತನಾಡಿ, ನಮ್ಮ ಚಲನ ವಲನಗಳು ಇಂದು ವೈದ್ಯರು ಅಥವಾ ವಿಜ್ಞಾನಿಗಳಿಂದ ಆಗುತ್ತಿಲ್ಲ. ಬದಲು ಎಲ್ಲವೂ ಸೃಷ್ಟಿಕರ್ತನಿಂದಲೇ ನಡೆಯುತ್ತಿದ್ದು, ಆತನೆದುರು ಶರಣಾಗ ಬೇಕೆಂದರು. ದೇವರ ಮೇಲಿನ ವಿಶ್ವಾಸ ಹೆಚ್ಚಿದಂತೆ ಹೃದಯವೈಶಾಲ್ಯತೆ, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಗೌಡ ಸಮಾಜದ ಅಧ್ಯಕ್ಷ ಪೇರಿಯನ ದಯಾನಂದ ಮಾತನಾಡಿ, ಜಾತ್ಯತೀತ ಭಾರತದಲ್ಲಿ ಅವರವರ ಧರ್ಮಪಾಲನೆಗೆ ಅವಕಾಶವಿದ್ದು, ಎಲ್ಲರೂ ಪ್ರೀತಿ-ವಿಶ್ವಾಸದಿಂದ ಬಾಳುವಂತಾಗಬೇಕು ಎಂದರು.

ಜಯಶ್ರೀ ಅನಂತಶಯನ ಅವರು ಮಾತನಾಡಿ, ವಿಶ್ವದಲ್ಲಿ ಇರುವದು ಮಾನವ ಧರ್ಮ ಒಂದೇ ಎಂದು ಹೇಳಿದರು. ಸರಕಾರಿ ದಾಖಲೆಗಳಲ್ಲಿ ಜಾತಿ ನಮೂದಿಸುವದು ನಿಂತರೆ ಧರ್ಮದ ಬೇಧ ಕಡಿಮೆಯಾಗುವ ದೆಂದರು. ಸೂಫಿ ಸಂತಳಾದ ರಾಬಿಯಾ, ತುಳಿಸೀದಾಸರು, ಕ್ರೈಸ್ತ ಹಾಗೂ ಇತರ ಗುರುಗಳು ಧರ್ಮವನ್ನು ಮೀರಿದ ಬೋಧನೆ ಮಾಡಿದ್ದರು ಎಂದು ನೆನಪಿಸಿದರು.

ವಕೀಲ ಕುಂಞ ಅಬ್ದುಲ್ಲಾ ಮಾತನಾಡಿ, ತುಳಸೀದಾಸರು ರಾಮಚಂದ್ರ ಮಾನಸ ರಚನೆಯನ್ನು ಮಸೀದಿಯ ಚಾಪೆಯ ಮೇಲೆ ಕುಳಿತು ಮಾಡಿದರೆಂದರು. ಇಂತಹ ಧರ್ಮ ಸಮನ್ವಯತೆ ಮುಂದುವರಿಯ ಬೇಕೆಂದರು.

ಅಧ್ಯಕ್ಷತೆಯನ್ನು ಮಂಗಳೂರು ವಿಭಾಗದ ಸಂಚಾಲಕ ಅಬ್ದುಸ್ಸಲಾಂ ವಹಿಸಿದ್ದು, ಧರ್ಮವನ್ನು ಅಪಾಯ ಕಾರಿ ಎಂದು ಬಿಂಬಿಸಲಾಗುತ್ತಿದ್ದು, ಭಗವಂತನ ಶ್ರೇಷ್ಠ ಸೃಷ್ಟಿಯಾದ ಮಾನವನು ಸೃಷ್ಟಿಕರ್ತನನ್ನು ಅರಿಯುವದು ಅವಶ್ಯ ಎಂದರು.

ಸ್ವಾಗತ ಭಾಷಣ ಮಾಡಿದ ಮೊಹಮ್ಮದ್ ಹನೀಫ್ ಎಲ್ಲ ಧರ್ಮದವರನ್ನು ಒಗ್ಗೂಡಿಸುವ, ಒಗ್ಗಟ್ಟು ಮೂಡಿಸುವ ಕಾರ್ಯವನ್ನು ಜಮಾಅತೆ ಇಸ್ಲಾಮಿ ಹಿಂದ್ ಮಾಡುತ್ತಿದೆ ಎಂದರು. ವಂದನಾರ್ಪಣೆಯನ್ನು ಎಂ. ಅಬ್ದುಲ್ಲಾ ಮಾಡಿದರು.