*ಸಿದ್ದಾಪುರ, ಮಾ. 8: ನೋಟು ಅಪಮೌಲ್ಯದಿಂದ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಬಡ್ಡಿ ವ್ಯವಹಾರ ಭಾಗಶಃ ನಿಯಂತ್ರಣಗೊಂಡಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ನೆಲ್ಲಿಹುದಿಕೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಲು ಮತ್ತು ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ತಲಪಿಸುವತ್ತ ನೋಟ್ ಅಪಮೌಲೀಕರಣ ಯೋಜನೆ ಸುಧಾರಣೆ ಸಾಧಿಸಿದೆ ಎಂದರು.
ವಿರೋಧ ಪಕ್ಷಗಳು ಕೇಂದ್ರ ಆಡಳಿತವನ್ನು ಆರೋಪಿಸುವದರಲ್ಲಿ ಯಾವದೇ ಹುರುಳಿಲ್ಲ ಎಂದು ಹೇಳಿದ ರಂಜನ್, ಕಾಂಗ್ರೆಸ್ ಪಕ್ಷ ನಕಲಿ ಗಾಂಧಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ಟೀಕಿಸಿದರು.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಹಕ್ಕು ಪತ್ರ ಇದ್ದರೂ ಯಾವದೇ ಸೌಲಭ್ಯ ದೊರಕುತಿಲ್ಲ. ಪರಿಸರ ಪ್ರೇಮದ ಹೆಸರಿನಲ್ಲಿ ಅಲ್ಲಿಯ ನಿವಾಸಿಗಳಿಗೆ ಯಾವದೇ ಸೌಲಭ್ಯ ದೊರಕದಂತೆ ತಡೆಯೊಡ್ಡಿರುವದು ಏಕೆ ಎಂದು ಅವರು ಪ್ರಶ್ನಿಸಿದರು. ಹಕ್ಕುಪತ್ರ ಪಡೆದ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಕಡು ಬಡವರಿಗೆ ನೀಡಲಾಗಿರುವ ಭೂಮಿ ಒಡೆತನದ ಪಟ್ಟಾ ದಾಖಲೆಯನ್ನು ಬಡವರಿಂದ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಪಿ.ಸಿ. ಅಚ್ಚಯ್ಯ (ಟುಟು), ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಯುವ ಮೋರ್ಚಾ ಸಮಿತಿ ಅಧ್ಯಕ್ಷ ದಿಲೀಪ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ತೋಟಂಬೈಲು ತಿಮ್ಮಯ್ಯ, ಸಿದ್ದಾಪುರ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕುನೂರು ನಾಣಯ್ಯ, ಕೆ.ಆರ್. ಸತೀಶ್ ಉಪಸ್ಥಿತರಿದ್ದರು.