ಮಡಿಕೇರಿ, ಮಾ. 9: ಸ್ಥಳೀಯ ನಗರಸಭಾ ಕಾರ್ಯಾಲಯ ಕಟ್ಟಡ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಮೇಲ್ಸೇತುವೆ ನಿರ್ಮಿಸುತ್ತಿರುವ ಬಗ್ಗೆ ಆಕ್ಷೇಪಿಸಿ ನಗರಸಭಾ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಪುರಾತತ್ವ ಸರ್ವೇಕ್ಷಣಾ ಪ್ರಾಧಿಕಾರದ 2010 ಪ್ರಕರಣ ಸಂಖ್ಯೆ 13ರ ಅನ್ವಯ, ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳ - ಅವಶೇಷಗಳ ಅಧಿನಿಯಮದಂತೆ ಮಡಿಕೇರಿ ಕೋಟೆ ಆವರಣವು ಸಂಪೂರ್ಣ ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟಿದೆ.
ಈ ಕೋಟೆಯಿಂದ 100 ಮೀಟರ್ ವ್ಯಾಪ್ತಿಯನ್ನು ಯಾವದೇ ಕಾಮಗಾರಿಯಿಂದ ನಿಷೇದಿತ ಪ್ರದೇಶವೆಂದು, 200 ರಿಂದ 300 ಮೀ. ತನಕ ನಿಯಂತ್ರಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
(ಮೊದಲ ಪುಟದಿಂದ) ಹೀಗಿದ್ದು, ಮಡಿಕೇರಿ ನಗರಸಭೆಯಿಂದ ಸುಮಾರು 70 ಮೀ. ವ್ಯಾಪ್ತಿಯಲ್ಲಿ, ಅಂಗವಿಕಲರ ಹೆಸರಿನಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಂಡು ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಸರ್ವೇಕ್ಷಣಾ ಪ್ರಾಧಿಕಾರ ಆಕ್ಷೇಪಿಸಿ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದೆ.
ಅಲ್ಲದೆ, ಕಾಮಗಾರಿ ಸಂಬಂಧ ನಗರಸಭೆಯು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಪ್ರಾಧಿಕಾರದ ಕರ್ನಾಟಕ ಪ್ರಾದೇಶಿಕ ನಿರ್ದೇಶಕರ ಕಚೇರಿಯಿಂದ ಅನುಮತಿ ಪಡೆದುಕೊಳ್ಳುವಂತೆ ಮೈಸೂರು ಶಾಖೆಯ ಕಿರಿಯ ಸಹಾಯಕ ಸಂರಕ್ಷಕರು ಸೂಚಿಸಿದ್ದಾರೆ. ಅದುವರೆಗೆ ಕಾಮಗಾರಿ ನಿಲ್ಲಿಸುವಂತೆ ನಿರ್ದೇಶಿಸಿದ್ದು, ಈ ಸಂಬಂಧ ಮಡಿಕೇರಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.