ಮಡಿಕೇರಿ, ಮಾ. 8: ಮನುಕುಲದಲ್ಲಿ ಇರುವದು ಗಂಡು-ಹೆಣ್ಣು ಎಂಬ ಜಾತಿ ಮಾತ್ರ. ಇವರಿಬ್ಬರು ಅಭಿವೃದ್ಧಿಯಾದಲ್ಲಿ ಮಾತ್ರ ಸಮಾಜದಲ್ಲಿ ಸಮತೋಲನ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಹೇಳಿದರು.

ಅವರು ಇಲ್ಲಿನ ವಿಕಾಸ್ ವಿಕಲ ಚೇತನ ಸಂಸ್ಥೆಯಲ್ಲಿ ಮಹಿಳಾ ದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಕೃತಕತೆ ತುಂಬಿದ್ದು, ಮಹಿಳೆಯರು, ಮಕ್ಕಳು ಸಹಜ ಜೀವನ ನಡೆಸುವ ಸಮಾಜ ನಿರ್ಮಾಣವಾಗಬೇಕು. ಪ್ರಬಲರಿಂದ ದುರ್ಬಲರ ಮೇಲೆ ದಬ್ಬಾಳಿಕೆ ನಡೆಯಬಾರದು ಎಂದು ಮಮ್ತಾಜ್ ಹೇಳಿದರು.

ಮುಖ್ಯ ಅತಿಥಿ, ಶಕ್ತಿಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಮಹಿಳೆಯರು ಆತ್ಮಶಕ್ತಿ ವೃದ್ಧಿಸಿಕೊಂಡರೆ ಸಂತಳಾದ ಮೀರಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರರಂತೆ ಎಂತಹ ಸಂದಿಗ್ಧತೆಯನ್ನೂ ಎದುರಿಸಿ ಮೇಲ್ಬರಬಹುದೆಂದರು.

ಸ್ವಸ್ಥ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ಮಹಿಳೆಯರನ್ನು ತುಳಿಯಲಾಗುತ್ತಿದೆ ಎಂಬದು ಕೇವಲ ಭ್ರಮೆ ಎಂದು ಹೇಳಿದರು. ಗಂಡಸರೊಡನೆ ಸ್ಪರ್ಧೆಗೆ ನಿಲ್ಲುವದಕ್ಕಿಂತ ಜೀವನದಲ್ಲಿ ಸಾಧನೆಗೆ ಒತ್ತು ನೀಡಿ ಮೇಲ್ಬರಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಕ್ಲಬ್ ಮಹೀಂದ್ರಾ ಸಂಸ್ಥೆಯ ರಮ್ಯ ಚಿಣ್ಣಪ್ಪ ಮತ್ತು ಕವಿತ, ವಿಕ್ರಂ ಜಾದೂಗಾರ್, ಸಂಸ್ಥೆಯ ರಮೇಶ್ ಮತ್ತು ಪುಟ್ಟಪ್ಪ ಉಪಸ್ಥಿತರಿದ್ದರು.

ಕ್ಲಬ್ ಮಹೀಂದ್ರ ಸಿಬ್ಬಂದಿಗಳ ಸಂಘ ಕಾರ್ಯಕ್ರಮ ಪ್ರಾಯೋಜಿಸಿತ್ತು. ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು.