*ಗೋಣಿಕೊಪ್ಪಲು, ಮಾ. 8: ಮಹಿಳೆಯರು ವರದಕ್ಷಿಣೆಯ ವಿರುದ್ದ ಸಿಡಿದೇಳಬೇಕು. ವರದಕ್ಷಿಣೆ ಪಿಡುಗನ್ನು ತೊಲಗಿಸಲು ಮಹಿಳೆಯರ ಒಗ್ಗಟ್ಟಿನ ಶ್ರಮ, ಹೋರಾಟ ಅಗತ್ಯ ಎಂದು ರಾಜ್ಯ ಬಿ.ಜೆ.ಪಿ. ಸದಸ್ಯೆ ರೀನಾ ಪ್ರಕಾಶ್ ಹೇಳಿದರು.ಮಹಿಳಾ ಸಮಾಜದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವರದಕ್ಷಿಣೆ ಮಹಿಳೆಯರಿಗೆ ಶಾಪವಾಗಿದೆ. ಇದರ ವಿರುದ್ದ ಧ್ವನಿ ಎತ್ತುವ ಮೂಲಕ ವರದಕ್ಷಿಣೆ ಆಚರಣೆಯನ್ನು ತೊಡೆದು ಹಾಕಬೇಕು. ಮದುವೆ ಎಂಬುದು ಹಾಸ್ಯದ ವಸ್ತುವಲ್ಲ. ಪ್ರತಿ ತಂದೆ-ತಾಯಿಗಳು ತಮ್ಮ ಮಗಳನ್ನು ಮದುವೆ ಮಾಡಿಸುವ ಮೊದಲು ಜಾಗೃತರಾಗಬೇಕು ಎಂದು ತಿಳಿಸಿದರು. ಕಾವೇರಿ ನದಿ ಕಲುಷಿತ ಗೊಂಡಿದೆ. ಪ್ರತಿಯೊಬ್ಬ ಮಹಿಳೆಯೂ ಕುಡಿಯುವ ಕಾವೇರಿಯ ನೀರನ್ನು ಶುದ್ದಿಯಾಗಿ ಇಡಲು ಕಾಳಜಿ ಹೊಂದಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ ಮಾತನಾಡಿ, ದೇಶದ ಭವಿಷ್ಯ ರೂಪಿಸಲು ತಮ್ಮ ಮಕ್ಕಳಿಗೆ ಉತ್ತಮ ನಡತೆಯನ್ನು ತಿಳಿ ಹೇಳುವಲ್ಲಿ ತಾಯಿಯ ಪಾತ್ರ ಮುಖ್ಯ ಎಂದರು.
ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮಹಿಳಾ ಸಮಾಜದ ಉಪಾಧ್ಯಕ್ಷೆ ನೂರೇರಾ ರತಿ ಅಚ್ಚಪ್ಪ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಕೋಶಾಧಿಕಾರಿ ರೀಣಾ ರಾಜೀವ್, ಸಮಾಜದ ಸದಸ್ಯರುಗಳು ಉಪಸ್ಥಿತರಿದ್ದರು.