ಮಡಿಕೇರಿ, ಮಾ. 8 : ಸಮಾಜದ ಶ್ರೇಯೋಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್‍ನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ವಿಶೇಷ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿರಾಗಾಂದಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಅಕ್ಕ ಮಹಾದೇವಿ ಸೇರಿದಂತೆ ಹಲವು ಮಹಿಳೆಯರು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್. ಶ್ರೀರಂಗಪ್ಪ ಮಾತನಾಡಿ, ಇಡೀ ದೇಶದಲ್ಲಿಯೇ ಲಿಂಗಾನುಪಾತ ದಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. 1000 ಪುರುಷರಿಗೆ 978 ಮಹಿಳೆಯರು ಇದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ರೆಯ ಶ್ವಾಸಕೋಶದ ತಜ್ಞ ಡಾ. ಸದಾಶಿವಪ್ಪ ಮಾತನಾಡಿ ಗಂಡು ಮತ್ತು ಹೆಣ್ಣು ಸಮಾನರು ಎಂಬ ಭಾವನೆ ಬರಬೇಕು. ಪುರುಷ ಮತ್ತು ಮಹಿಳೆಯರು ಎಂಬ ತಾರತಮ್ಯ ಸಮಾಜದಲ್ಲಿ ಇರಬಾರದು ಎಂದು ಅವರು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ ಮಾತನಾಡಿ 18 ವರ್ಷದೊಳಗೆ ಹುಡುಗಿಯರಿಗೆ ಮದುವೆ ಮಾಡಬಾರದು. ಶಿಕ್ಷಣ, ಆರೋಗ್ಯ ಇತರೆ ಹಕ್ಕುಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು.ವೈದ್ಯಕೀಯ ಕಾಲೇಜಿನ ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ತಜ್ಞರಾದ ರಾಜೇಶ್ವರಿ, ಡಾ.ಹರ್ಷ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಮೋಹಿನೇಶ್, ಆರೋಗ್ಯ ಸಹಾಯಕಿಯರು ಇತರರು ಇದ್ದರು.