ಕುಶಾಲನಗರ, ಮಾ. 8: ಕುಶಾಲನಗರ ಬೈಚನಹಳ್ಳಿಯ ಗ್ರಾಮದೇವತೆ ಶ್ರೀ ಮಾರಿಯಮ್ಮ ದೇವರ 8ನೇ ವರ್ಷದ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ವೇದಬ್ರಹ್ಮ ಹರಿಭಟ್ ನೇತೃತ್ವದ ಅರ್ಚಕರ ತಂಡದಿಂದ ಗಣಪತಿ ಹೋಮ, ಚಂಡಿಕ ಪಾರಾಯಣ, ದುರ್ಗಾಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಗಣಪತಿ ದೇವಾಲಯ, ಅಯ್ಯಪ್ಪ ಸ್ವಾಮಿ ದೇವಾಲಯ, ಕನ್ನಿಕಪರಮೇಶ್ವರಿ ದೇವಾಲಯ, ಸುಬ್ರಮಣ್ಯ ದೇವಾಲಯ, ಚೌಡೇಶ್ವರಿ ದೇವಾಲಯ, ಮಾತೆ ಕಾವೇರಿ ಆರತಿ ಬಳಗ, ಶ್ರೀ ಮುತ್ತಪ್ಪ ದೇವಾಲಯ, ಸೋಮೇಶ್ವರ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರಾಮ್‍ದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಕೆ.ಆರ್. ಶಿವಾನಂದ್, ದೇವಸ್ಥಾನ ಸೇವಾ ಸಮಿತಿ ಪ್ರಮುಖರು, ಬೈಚನಹಳ್ಳಿ ಗೆಳೆಯರ ಬಳಗದ ಪದಾಧಿಕಾರಿಗಳು ಈ ಸಂದರ್ಭ ಇದ್ದರು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.