ಮಡಿಕೇರಿ, ಮಾ. 8: ಹೈದರಾಬಾದ್‍ನಲ್ಲಿ ಇತ್ತೀಚೆಗೆ ನಡೆದ 38ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ 20 ಕ್ರೀಡಾಪಟುಗಳು ಪಾಲ್ಗೊಂಡು ಸಾಧನೆ ತೋರಿದ್ದಾರೆ.

ಮಹಿಳೆಯರ ವಿಭಾಗದಲ್ಲಿ 60 ವಯಸ್ಸಿನ ವಿಭಾಗದಲ್ಲಿ ಮುಲ್ಲೇರ ಪೊನ್ನಮ್ಮ ಭಾರದ ಗುಂಡು ಎಸೆತದಲ್ಲಿ ಪ್ರಥಮ, ಜಾವಲಿನ್ ಥ್ರೋನಲ್ಲಿ ದ್ವಿತೀಯ, 55ರ ವಿಭಾಗದಲ್ಲಿ ಚೇಮಿರ ಸೀತಮ್ಮ ಭಾರದ ಗುಂಡು ಎಸೆತದಲ್ಲಿ ದ್ವಿತೀಯ, 40ರ ವಿಭಾಗದ ಭಾರದ ಗುಂಡು ಎಸೆತದಲ್ಲಿ ಕೇಚೆಟ್ಟಿರ ರೇಷ್ಮ ಸೋಮಯ್ಯ ತೃತೀಯ, 50ರ ವಿಭಾಗದ 800 ಮೀಟರ್ ಓಟದಲ್ಲಿ ಶನಿವಾರ ಸಂತೆಯ ಕಮಲಮ್ಮ ತೃತೀಯ, ಪುರುಷರ ವಿಭಾಗದಲ್ಲಿ ಮರಗೋಡಿನ ಚಿಣ್ಣಪ್ಪ 5 ಸಾವಿರ ಹಾಗೂ 10 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ, 70ರ ವಿಭಾಗದಲ್ಲಿ ಪೆಮ್ಮಂಡ ಅಪ್ಪಯ್ಯ ರಿಲೇಯಲ್ಲಿ ದ್ವಿತೀಯ, ಬೈರೇಟಿರ ಸಾಬು ಪೂಣಚ್ಚ 60ರ ವಿಭಾಗದ ರಿಲೇಯಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ವಿಜೇತರು ಚೀನಾದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‍ನ ಪ್ರಮುಖರು ತಿಳಿಸಿದ್ದಾರೆ.