ಸೋಮವಾರಪೇಟೆ, ಮಾ.8: ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿ ಅನುಸಾರ ಕೊಡಗು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿರುವ ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ, ಜನತೆಗೆ ಮಾರಕವಾಗುವ ಈ ಪ್ರಸ್ತಾಪವನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಅವರು, ಕೆಲ ಡೋಂಗಿ ಪರಿಸರವಾದಿಗಳ ಕುಮ್ಮಕ್ಕಿನಿಂದ ಪಶ್ಚಿಮ ಘಟ್ಟ ಪ್ರದೇಶಗಳು ಸೂಕ್ಷ್ಮ ಪರಿಸರತಾಣ ಎಂದು ಘೋಷಣೆಯಾಗಿದೆ. ಕೊಡಗಿನ ಮೂಲ ನಿವಾಸಿಗಳು ಇಲ್ಲಿಯೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕಾದರೆ ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಯನ್ನು ತಿರಸ್ಕರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜವಾಬ್ದಾರಿಯುತ ವರ್ತನೆ ತೋರಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿದ್ದ ಹೋರಾಟ ಸಮಿತಿಯ ವಕ್ತಾರ ಎಂ.ಎ. ಶ್ಯಾಂಪ್ರಕಾಶ್ ಮಾತನಾಡಿ, ಇಲ್ಲಿನ ಕಾಫಿ ಮಂಡಳಿಯು ಕೇಂದ್ರ ಸರಕಾರದ ವತಿಯಿಂದ ನೀಡಲಾಗುವ ಯೋಜನೆಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರ ಮತ್ತು ಕಾಫಿ ಬೆಳೆಗಾರರ ಹಿತವನ್ನು ಕಾಪಾಡಬೇಕಾದ ಕಾಫಿ ಮಂಡಳಿ ಬೆಳೆಗಾರರನ್ನು ವಿಶ್ವಾಸಕ್ಕೆ ತೆಗದುಕೊಳ್ಳುತ್ತಿಲ್ಲ. ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಅನುದಾನಗಳು, ಸಹಾಯಧನ, ಮಾಹಿತಿ ಕಾರ್ಯಾಗಾರ ಕುರಿತು ಬೆಳೆಗಾರರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ರೈತರೇ ಬೆಳೆಯುವ ಬಳಂಜಿ ಮರ ಕಡಿದು ಸಾಗಿಸಲು ಅರಣ್ಯ ಇಲಾಖೆ ವಿನಾಯಿತಿ ನೀಡಬೇಕು. ರೈತರು ಮತ್ತು ಕಾಫಿ ಬೆಳೆಗಾರರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಾಲದಲ್ಲಿ ಮುಳುಗಿದ್ದಾರೆ. ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಸ್ಥಳೀಯ ಕಾಫಿ ಖರೀದಿದಾರರು ಬೆಳೆಗಾರರು ಹಾಗೂ ರೈತರಿಂದ ಕಾಫಿ ಖರೀದಿಸುವ ಸಂದರ್ಭ ಬೆಲೆಯಲ್ಲಿ ಮೋಸ ಎಸಗುತ್ತಿದ್ದಾರೆ. ಮಾರುಕಟ್ಟೆಯ ಬೆಲೆ ಹೊರ ಜಿಲ್ಲೆಗಳಲ್ಲಿ ಅಧಿಕವಿದ್ದರೆ, ಸ್ಥಳೀಯವಾಗಿ 100 ರಿಂದ 200 ರೂಪಾಯಿಯಷ್ಟು ವ್ಯತ್ಯಾಸವಿದೆ. ಈ ಬಗ್ಗೆ ಬೆಳೆಗಾರರು ಜಾಗೃತರಾಗಬೇಕು ಎಂದು ಶ್ಯಾಂ ಪ್ರಸಾದ್ ಹೇಳಿದರು. ತಾಲೂಕಿನಲ್ಲಿರುವ ಸಿ ಮತ್ತು ಡಿ ಜಾಗವನ್ನು ಕಂದಾಯ ಇಲಾಖೆಗೆ ಸರ್ಕಾರ ಒಪ್ಪಿಸಿದ್ದು, ಅದನ್ನು ಅರಣ್ಯ ಇಲಾಖೆಯವರು ಸಾಮಾಜಿಕ ಅರಣ್ಯ ಎಂದು ನಮೂದಿಸಿಕೊಂಡು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ತಕ್ಷಣ ರೈತರು ಸಲ್ಲಿಸಿರುವ ಫಾರಂ 50 ಮತ್ತು 53ರಲ್ಲಿನ ಅರ್ಜಿಗಳನ್ನು ವಿಲೇವಾರಿ ಮಾಡಿ ಜಾಗಕ್ಕೆ ದಾಖಲೆ ಒದಗಿಸಬೇಕೆಂದು ಗೋಷ್ಠಿಯಲ್ಲಿದ್ದ ಸಮಿತಿಯ ಉಪಾಧ್ಯಕ್ಷೆ ಜಲಾ ಹೂವಯ್ಯ ಒತ್ತಾಯಿಸಿದರು.
ಸಂತೆ ದಿನವಾದ ಸೋಮವಾರ ತಾಲೂಕಿನ ವಿವಿಧೆಡೆಗಳಿಂದ ರೈತರು ಮತ್ತು ಬೆಳೆಗಾರರು ಇಲ್ಲಿನ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಾರೆ. ಆದರೆ ಪ್ರತಿ ಸೋಮವಾರ ತಹಶೀಲ್ದಾರರು ತಾಲೂಕು ಕಚೇರಿಯಲ್ಲಿ ಇರುವದಿಲ್ಲ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಸೋಮವಾರ ತಹಶೀಲ್ದಾರ್ ಕಚೇರಿಯಲ್ಲಿ ಹಾಜರಿರಬೇಕು ಎಂದು ಸಮಿತಿಯ ಖಜಾಂಚಿ ಕೆ.ಎಂ. ದಿನೇಶ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಎಸ್. ಸುದೀಪ್, ಪದಾಧಿಕಾರಿಗಳಾದ ಕುಶಾಲಪ್ಪ, ಬಿ.ಎ. ತಮ್ಮಯ್ಯ, ಜಾನಕಿ ವೆಂಕಟೇಶ್, ಕಾರ್ಯಪ್ಪ ಉಪಸ್ಥಿತರಿದ್ದರು.