ಮಡಿಕೇರಿ, ಮಾ. 8: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಹಾಗೂ ಹೇಮಾವತಿ ಜಲಾಶಯದ ಶೀತಪೀಡಿತ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಗಳಾದ ಮಾವಿನಹಳ್ಳಿ, ಜನಾರ್ದನ ಹಳ್ಳಿ, ಮಾಗಡಿ ಹಳ್ಳಿ, ಹೊನ್ನೆಕೋಡಿ ಹಾಗೂ ಹಿಪ್ಪಗಳಲೆ ಗ್ರಾಮಗಳಲ್ಲಿ ಕೆಲವು ಮನೆಗಳು ಶೀತವಾಗಿ ವಾಸಕ್ಕೆ ಯೋಗ್ಯವಾಗಿಲ್ಲದ ಕುರಿತು ಹಾಗೂ ಶೀತಪೀಡಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಇತ್ತೀಚೆಗೆ ವಿಧಾನಸಭೆಯ ಸರ್ಕಾರಿ ಭರವಸೆ ಸಮಿತಿ ಅಧ್ಯಕ್ಷ ಕ್ಯಾತಸಂದ್ರ ಎನ್. ರಾಜಣ್ಣ ನೇತೃತ್ವದ ಸದಸ್ಯರ ಸಮಿತಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಸಂಬಂಧ ಕೆಲವು ಶಿಫಾರಸ್ಸುಗಳನ್ನು ಮಾಡಿದೆ.
ಶಿಫಾರಸ್ಸುಗಳು ಇಂತಿವೆ: ಜನಾರ್ಧನಹಳ್ಳಿ ಹಾಗೂ ಮಾವಿನ ಹಳ್ಳಿ, ಮಾಗಡಿ ಹಳ್ಳಿ, ಹೊನ್ನೆಕೋಡಿ ಹಾಗೂ ಹಿಪ್ಪಗಳಲೆ ಗ್ರಾಮಗಳನ್ನು ಪರಿಶೀಲಿಸಿ, ಈ ಹಳ್ಳಿಗಳಲ್ಲಿ ಮಳೆಗಾಲದಲ್ಲಿ 300 ಅಡಿ ದೂರ ಅಂತರದವರೆಗೂ ನೀರು ನಿಲ್ಲುತ್ತದೆಂಬ ವಿಚಾರವನ್ನು ಪರಿಗಣಿಸಿ, ಅರ್ಧ ಎಕರೆ, ಒಂದು ಎಕರೆ ಜಮೀನು ಇರುವವರು ಈ ಊರಿನಲ್ಲಿಯೇ ವಾಸಿಸಲು ಬಯಸುತ್ತಿರುವ ಹಿನ್ನೆಲೆಯಲ್ಲಿ, ಈ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕಾಂಕ್ರೀಟ್ ರಸ್ತೆ, ಚರಂಡಿ, ಕುಡಿಯುವ ನೀರು, ಬಸ್ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಹಾಗೂ ಸ್ಥಳಾಂತರವಾಗಲು ಇಚ್ಛಿಸುವ ಸಂತ್ರಸ್ಥ ಕುಟುಂಬಗಳಿಗೆ ಪರ್ಯಾಯ ಜಾಗವನ್ನು ನೀಡುವದು.
ಕಂದಾಯ ಸಚಿವರು ನೀಡಿದ ಭರವಸೆಯಂತೆ 5.85 ಎಕರೆ ಜಮೀನು ಸ್ವಾಧೀನದಲ್ಲಿರುವದಾಗಿ ತಿಳಿಸಿದ ಹಿನ್ನೆಲೆ ಯಲ್ಲಿ ಆ ಭೂಮಿ ಉಪಯೋಗಿಸಿ ನಿವೇಶನ ಹಂಚಿ ಮನೆಗಳ ನಿರ್ಮಾಣ ಮಾಡಿಕೊಡುವದು.
ಈ ಭಾಗದ ಫಲಾನುಭವಿಗಳಾಗಿದ್ದ ಕೂಲಿ ಕಾರ್ಮಿಕರಿಗೆ ಸ್ವಾಧೀನಪಡಿಸಿ ಕೊಂಡ ಜಾಗದಲ್ಲೇ ನಿವೇಶನ ನೀಡುವದು. ಜನಾರ್ಧನಹಳ್ಳಿ, ಮಾವಿನಹಳ್ಳಿ ನಕ್ಷೆಯನ್ನು ಪರಿಶೀಲಿಸಿದ ಸಮಿತಿಯು ಈ ಸರ್ವೆ ನಂಬರ್ ಅಡಿಯಲ್ಲಿಯೇ ಮನುಗನಹಳ್ಳಿಯೂ ಸೇರಿರುವದರಿಂದ ಗ್ರಾಮಸ್ಥರ ಕೋರಿಕೆಯಂತೆ ಎಫ್.ಆರ್.ಎಲ್.ನ್ನು ಪರಿಗಣಿಸಿ ಜನಾರ್ಧನಹಳ್ಳಿ, ಮಾವಿನಹಳ್ಳಿಗೆ ಕಲ್ಪಿಸುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹಾಗೂ ಇತರೆ ಸೌಕರ್ಯಗಳನ್ನು ಮನುಗನಹಳ್ಳಿಗೂ ವಿಸ್ತರಿಸುವದು.
ಈ 5 ಗ್ರಾಮಗಳಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿಯಲ್ಲಿರುವ ಅನುದಾನವನ್ನು ಬಳಸಿಕೊಂಡು ಗ್ರಾಮಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಡುವದು.
ಈ ಗ್ರಾಮಗಳಲ್ಲಿ ಅವಶ್ಯಕತೆ ಯಿರುವಲ್ಲಿ ಕಂದಾಯ ಇಲಾಖಾ ವತಿಯಿಂದ ರುದ್ರಭೂಮಿಗೆ ಭೂಮಿಯನ್ನು ನೀಡಬೇಕೆಂದು ಮತ್ತು ಸ್ಥಳಾಂತರಿಸಿದ ದೇವಸ್ಥಾನಗಳ ಕಾರ್ಯ ಅಪೂರ್ಣವಾಗಿದ್ದು, ದೇವಸ್ಥಾನ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಅನುಕೂಲ ಕಲ್ಪಿಸುವದು.
ಈ ಗ್ರಾಮಗಳ ಜನರು ಆನೆಗಳ ಹಾವಳಿಯಿಂದ ಭಯಭೀತ ರಾಗಿರುವದನ್ನು ತಪ್ಪಿಸಲು ಕನಿಷ್ಟ ಪಕ್ಷ 500 ಮೀಟರ್ ಸೋಲಾರ್ ಫೆನ್ಸಿಂಗ್ ವ್ಯವಸ್ಥೆ ಮಾಡುವದು. ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವದು. ಈ ಗ್ರಾಮಗಳಲ್ಲಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಾಗೂ ಇತರೆ ಎಲ್ಲಾ ಗ್ರಾಮಸ್ಥರಿಗೆ ಬಸ್ ಸೌಕರ್ಯ ಇಲ್ಲವೆಂದು ನೀಡಿರುವ ಮನವಿಯನ್ನು ಪರಿಗಣಿಸಿ, ಕಾಂಕ್ರೀಟ್ ರಸ್ತೆಯನ್ನು ಅಗಲೀಕರಣಗೊಳಿಸಿ, ಸಂಪರ್ಕ ರಸ್ತೆಯನ್ನು ಕಲ್ಪಿಸಿ, ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಸಮಿತಿ ತಿಳಿಸಿದೆ.
ಭೂರಹಿತ ಸ್ಥಳೀಯರಿಂದ 94(ಸಿ) ನಿಯಮದಡಿಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಹಕ್ಕುಪತ್ರಗಳನ್ನು ನೀಡುವಂತೆ ಸಮಿತಿಯು ಶಿಫಾರಸ್ಸು ಮಾಡಿದೆ.
ಇತ್ತೀಚೆಗೆ ವಿಧಾನ ಸಭೆಯ ಭರವಸೆ ಸಮಿತಿ ಅಧ್ಯಕ್ಷ ಕೆ.ಎನ್. ರಾಜಣ್ಣ ನೇತೃತ್ವದ ಸಮಿತಿ ಜಿಲ್ಲೆಯ ಹಾರಂಗಿ ಮತ್ತು ಹೇಮಾವತಿ ಹಿನ್ನೀರಿನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದನ್ನು ಸ್ಮರಿಸಬಹುದಾಗಿದೆ.