10 ವರ್ಷಗಳ ಹಿಂದೆ ಶಕ್ತಿಗೆ 50 ವರ್ಷ ತುಂಬಿದ ಸಂದರ್ಭ, ಕೊಡಗಿನ ವಿವಿಧೆಡೆ ಹತ್ತಾರು ಕಾರ್ಯಕ್ರಮಗಳು ಹಾಗೂ ಅಂತಿಮವಾಗಿ ಮಡಿಕೇರಿಯಲ್ಲಿ 3 ದಿನಗಳ ಸಾರ್ವಜನಿಕ ಸಮಾರಂಭಗಳು ಅಭೂತಪೂರ್ವವಾಗಿ ನಡೆದವು.ದಿನಗಳು ಕಳೆದು ಹೋಗುತ್ತಿವೆ ಎಂದು ಮೆಲುಕು ಹಾಕುತ್ತಿರುವಷ್ಟರಲ್ಲೇ 10 ವರ್ಷಗಳು ಪೂರ್ಣಗೊಂಡಿದ್ದವು. ‘‘ಶಕ್ತಿ’’ಗೆ 60 ಪೂರ್ಣಗೊಂಡಿತ್ತು. ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮಕ್ಕಾಗಿ ಅಬ್ಬಿಧಾಮ ತೋಟದ ಮನೆಯ ಸಭಾಂಗಣವನ್ನು ಆಯ್ಕೆ ಮಾಡಿಕೊಂಡೆವು. ತಾರೀಖು 4ರ ಶನಿವಾರ ಬೆಳಿಗ್ಗೆ 9 ಗಂಟೆಗೆ ‘‘ಶಕ್ತಿ’’ ಕಾರ್ಯಾಲಯದಲ್ಲಿ ಶಕ್ತಿ ದೇವತೆಗೆ ಸ್ಮರಣೀಯ ಪೂಜೆ, ಬಳಗದವರೊಡ ಗೂಡಿ ಇಡಿಯ ‘‘ಶಕ್ತಿ’’ ಕುಟುಂಬ ದಿಂದ ದುರ್ಗಾ ಮಾತೆಗೆ ನಮಸ್ಕಾರ ಪೂರ್ವಕ ಧನ್ಯವಾದ ಸಮರ್ಪಣೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಂದ ದೇವಿಯ ಭಾವಚಿತ್ರಕ್ಕೆ ಮಹಾಮಂಗಳಾರತಿ ಹಾಗೂ ನಂತರ ಇಡಿಯ ಸಮಾಜದ ಒಳಿತಿಗಾಗಿ ಶರಣಾಗತಿಯ ಪ್ರಾರ್ಥನೆ, ಹಸಿವಿದ್ದ ಹೊಟ್ಟೆಗಳಿಗೆ ಅಬ್ಬಿಧಾಮದಲ್ಲಿ ಫಲಹಾರ, 10-30 ಗಂಟೆಗೆ ಲೇಖಕರು, ಆಹ್ವಾನಿತ ಸಾಹಿತಿಗಳು ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಪುಟ್ಟ ಸಮಾರಂಭ. ಕೊಡಗಿನ ಬಹು ಮಂದಿಗೆ ಅರಿವಿಲ್ಲದೆ ದೇಶ-ವಿದೇಶಗಳ ಅನುಯಾಯಿಗಳ ಹೃದಯದಲ್ಲಿ ನೆಲೆಸಿರುವ ಹಾಗೂ ಬದುಕಿಗೆ ಮಾರ್ಗದರ್ಶಕರಾಗಿರುವ ಮಡಿಕೇರಿಯ ಶ್ರೀ ಬಿ. ಕೆ. ಸುಬ್ಬಯ್ಯ ಅವರಿಂದ ಕಾರ್ಯಕ್ರಮ ಉದ್ಘಾಟನೆ ಹಾಗೂ ಆಶೀರ್ವಚನ; ಸರಳ ವ್ಯಕ್ತಿತ್ವದ ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರಿಂದ ಅಧ್ಯಕ್ಷ ಸ್ಥಾನದ ಭಾವನಾತ್ಮಕ ನುಡಿಗಳು ಜಿಲ್ಲೆಯ ಸಾಹಿತಿ, ವಿಮರ್ಶಕಿ, ಉಪನ್ಯಾಸಕಿ ಡಾ|| ರೇಖಾವಸಂತ್‍ರವರಿಂದ ಸಾಹಿತಿಗಳಿಗೆ ಕಿವಿಮಾತು, ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಂದ ಬರಹಗಳ ಬಗ್ಗೆ ಅನಿಸಿಕೆ. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ. ಅಧ್ಯಾತ್ಮಿಕ ನೆಲೆಯಲ್ಲಿ ಸಮಾಜದಲ್ಲಿ ತನ್ನದೇ ಸ್ಥಾನ ಹೊಂದಿರುವ ಗುರೂಜಿ ಶ್ರೀ ಬಿ. ಕೆ. ಸುಬ್ಬಯ್ಯ ಅವರಿಗೆ ಗೌರವ. ಕಾರ್ಯಕ್ರಮದ ಔಪಚಾರಿಕ ನಡಾವಳಿಕೆ ನಂತರ ಎರಡನೇ ಕಾರ್ಯಕ್ರಮಕ್ಕೆ ಸಜ್ಜು. ಏಜೆಂಟರು ಮತ್ತು ವರದಿಗಾರರ ಸಭೆಯಲ್ಲಿ ಶಕ್ತಿಯ ಏಳಿಗೆಗೆ ಕಾರಣರಾದ ಕೊಡಗಿನ ಜನತೆಯೊಂದಿಗೆ ಏಜೆಂಟರು ಮತ್ತು ವರದಿಗಾರರಿಗೂ ಕೃತಜ್ಞತೆ ಸಲ್ಲಿಕೆ, ವೇದಿಕೆಯಲ್ಲಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಸಲಹಾ ಸಂಪಾದಕ ಬಿ. ಜಿ. ಅನಂತಶಯನ, ಸಂಪಾದಕ ಜಿ. ಚಿದ್ವಿಲಾಸ್, ವ್ಯವಸ್ಥಾಪಕಿ ಜಿ. ಆರ್. ಪ್ರಜ್ಞಾ ಇವರುಗಳೊಂದಿಗೆ ಹಿರಿಯ ಏಜೆಂಟರುಗಳಾದ ಎಂ. ಎ. ವಸಂತ್ ಹಾಗೂ ಎಂ. ಜಿ. ಮಾದಯ್ಯ ಇವರುಗಳಿಗೂ ಆಹ್ವಾನ. ಆಡಳಿತ, ಸಂಪಾದಕೀಯ ವಿಚಾರಗಳ ಚರ್ಚೆಯೊಂದಿಗೆ ಹೆಚ್ಚಿನ ಸೇವೆ ಸಲ್ಲಿಸಿದವರಿಗೆ ಸನ್ಮಾನ. ಕೊಡಗಿನ ಧಾರ್ಮಿಕ ಶೈಕ್ಷಣಿಕ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳಿಗೆ ಆರ್ಥಿಕ ನೆರವು ನೀಡಿ ಕೊಡುಗೈ ದಾನಿ ಎನಿಸಿಕೊಂಡಿರುವ ಮಡಿಕೇರಿಯ ಮುಳಿಯ ಕೇಶವಪ್ರಸಾದ್ ಅವರಿಗೂ ಗೌರವ ಸಮರ್ಪಣೆ.

ಗಣರಾಜ್ಯೋತ್ಸವ ಸಂದರ್ಭ ದೆಹಲಿಯಲ್ಲಿ ದೇಶದ ಮಹಿಳಾ ಎನ್. ಸಿ.ಸಿ. ಘಟಕವನ್ನು ಮುನ್ನಡೆಸಿದ್ದ ಮಡಿಕೇರಿಯ ಎ. ಜಿ. ಐಶ್ವರ್ಯ ದೇಚಮ್ಮ ಇವಳಿಗೆ ಪ್ರೀತಿಯ ಸನ್ಮಾನದ ಉತ್ತೇಜನ. ನಂತರ ‘‘ಶಕ್ತಿ’’ಯ ಬೆಳವಣಿಗೆಯಲ್ಲಿ ಪಾತ್ರ ವಹಿಸಿರುವ ‘‘ಶಕ್ತಿ’’ ಬಳಗ, ಏಜೆಂಟರು ಹಾಗೂ ವರದಿಗಾರರಿಗೆ ಸ್ಮರಣಿಕೆ ನೀಡಿಕೆ. ಊಟೋಪಚಾರದ ನಂತರ 60ರ ಸಮಾರಂಭಕ್ಕೆ ಮುಕ್ತಾಯ ಹಾಡಲಾಯಿತು. ಕಿರು ಕಾಣಿಕೆಯೊಂದಿಗೆ ಮನೆಗೆ ಮರಳಿದ ಬಳಗ ಸಂಜೆ ಪುಟ್ಟ ಸಂತೋಷ ಕೂಟ, ಹಿರಿಯಣ್ಣನಂತಿರುವ ‘‘ಶಕ್ತಿ’’ಗೆ ಮಾಧ್ಯಮ ಮಿತ್ರರೊಡಗೂಡುವ ತವಕ. ಹಾಗಾಗಿ ಪುಟ್ಟ ಔತಣ ಕೂಟ. ಜೊತೆಗಿದ್ದವರು ಬೆರಳೆಣಿಕೆಯ ಸ್ನೇಹಿತರು. ಮುಂಜಾನೆಯಿಂದ ರಾತ್ರಿವರೆಗಿನ ಕಾರ್ಯಕ್ರಮಗಳಲ್ಲಿ ಮುಕ್ತಾಯದೊಂದಿಗೆ 61ರ ಹೆಜ್ಜೆಯನ್ನು ಜಾಗರೂಕತೆಯಿಂದ, ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಇಡುವ ಸಂಕಲ್ಪದೊಂದಿಗೆ ಶುಭರಾತ್ರಿ ಕೋರಲಾಯಿತು.

-ಸಂಪಾದಕ‘ಶಕ್ತಿ’ಗೆ ಅರವತ್ತು ತುಂಬಿದೆ. ಅರವತ್ತು ವರುಷದ ಹಿಂದೆ 1957ರ ಮಾರ್ಚ್ 4ರ ಉದ್ಘಾಟನೆ ಹೇಗಾಗಿರ ಬಹುದು ಎಂಬ ನಮ್ಮ ಕುತೂಹಲಕ್ಕೆ ಇಂಡಿಯನ್ ಎಕ್ಸ್‍ಪ್ರೆಸ್ ಬರಹಗಾರ, ಕೊಡಗಿನಲ್ಲಿ ನೆಲೆಸಿದ್ದ ಗಮಕಿ ಅನಂತ ಪದ್ಮನಾಭರಾಯರ ಪುತ್ರ ಎಂ.ಎ. ಜಯರಾಮ್ ರಾವ್ ‘ಶಕ್ತಿ’ಗೆ ಬರೆದಿದ್ದ ಪತ್ರವೊಂದರಲ್ಲಿ ಒಂದಷ್ಟು ತಂಪೆರೆದಿ ದ್ದಾರೆ. 1957 ಮಾರ್ಚ್ 4ರಂದು ಮಡಿಕೇರಿಯಲ್ಲಿ ಒಂದು ಸರಳ ಸಮಾರಂಭ ನಡೆಯುತ್ತದೆ. ಎಂ.ಎ. ಜಯರಾಮ್ ಪ್ರಾರ್ಥನಾ ಗೀತೆ ಹಾಡಿದರಂತೆ. ಹಾಡು ಚೆನ್ನಾಗಿತ್ತೆಂದು ಹೇಳಿದ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣ ಅವರು ಜಯರಾಮ್ ಅವರಿಂದ ಮತ್ತೆರಡು ಹಾಡು ಹಾಡಿಸಿದರಂತೆ. ಗೋಪಾಲಕೃಷ್ಣ ಅವರ ಸ್ವಾಗತ ಭಾಷಣದ ಬಳಿಕ, ಮಡಿಕೇರಿಯಲ್ಲಿ ಬಾಟಾ ಶೂ ಅಂಗಡಿಯ ಮಹಡಿಯ ಮೇಲೆ ಕೋಣೆಯೊಂದರಲ್ಲಿ ವಕೀಲಿ ವೃತ್ತಿ ಆರಂಭ ಮಾಡಿದ್ದ ಮನೆಯಪಂಡ ಮುತ್ತಣ್ಣ ಅವರು ‘ಶಕ್ತಿ’ಯ ಪ್ರಥಮ ಪ್ರತಿಗಳನ್ನು ಬಿಡುಗಡೆ ಮಾಡಿದರು ಎಂದು ಜಯರಾಮ್ ಬರೆದಿದ್ದಾರೆ.

ಐದು ವರ್ಷ ಮಡಿಕೇರಿಯಲ್ಲಿ ವಕೀಲಿ ವೃತ್ತಿ ಮಾಡಿದ್ದ ಮುತ್ತಣ್ಣ ಅವರು ಚೇರಳ ಶ್ರೀಮಂಗಲದ ತಮ್ಮ ತೋಟದಲ್ಲಿ ವಾಸಿಸುತ್ತಾರೆ. ಬಹಳ ಇತ್ತೀಚೆಗೆ, ಅಂದರೆ 2015ರಲ್ಲಿ ನಿಧನರಾಗುತ್ತಾರೆ. ಇದೀಗ ಅರವತ್ತರ ಸಂಭ್ರಮ ಆಚರಿಸಿದ ‘ಶಕ್ತಿ’ಯ ತಂಡ ಚೇರಳ ಶ್ರೀಮಂಗಲದ ಮನೆಯಪಂಡ ಮುತ್ತಣ್ಣ ಅವರ ಮನೆಗೆ ತೆರಳಿತು. ಅವರ ಪುತ್ರ ಮನೆಯಪಂಡ ಕುಟುಂಬದ ಅಧ್ಯಕ್ಷ ಮುತ್ತಣ್ಣ ಸೋಮಯ್ಯ (ಸಚಿನ್) ಮತ್ತು ಪತ್ನಿ ಅಂಜಲಿ ಅವರನ್ನು ಭೇಟಿ ಆಗಿ ಕೃತಜ್ಞತಾಪೂರ್ವಕ ಹಾರಾರ್ಪಣೆ ಮಾಡಿತು. ಒಳ್ಳೆಯ ಗಾಯಕ, ಉತ್ತಮ ವಾಗ್ಮಿ, ಸಂಗೀತಗಾರ, ಬರಹಗಾರ ಹಾಗೂ ಚಿತ್ರಕಲಾವಿದರೂ ಆಗಿದ್ದ ಬಿ.ಎಸ್. ಗೋಪಾಲಕೃಷ್ಣ ಅವರು ಮೊದಲು ನಂದಾದೀಪ ಎಂಬ ಮಾಸ ಪತ್ರಿಕೆಯನ್ನು ತಂದರು. ಸಹಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದ ಅವರು ಸ್ವತಂತ್ರ ಬದುಕಿನತ್ತ ಹೊರಟು ಒಂದಷ್ಟು ದಿನ ಲಾಂಡ್ರಿ ನಡೆಸಿದುದು ಇದೆ. ಇದರಲ್ಲೂ ಸೋತ ಅವರು ದಿಟ್ಟ ಹೆಜ್ಜೆ ಇರಿಸಿ ‘ಶಕ್ತಿ’ ಆರಂಭಿಸಿದರು ಎಂದು ಕುಟುಂಬದ ಹಿರಿಯರು ಹಾಗೂ ಸ್ನೇಹಿತರು ನೆನಪನ್ನು ಮೆಲುಕು ಹಾಕುತ್ತಾರೆ.‘‘ಶಕ್ತಿ’’ಯೊಂದಿಗೆ ದಶಕಗಳ ಒಡನಾಟ ಹೊಂದಿದ, ಏಜೆನ್ಸಿಯಲ್ಲಿ ವಿಶೇಷ ರೀತಿ ಸೇವೆ ಸಲ್ಲಿಸುತ್ತಿರುವ, ಸಂಸ್ಥೆಯಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನುಭವ ಹಂಚಿಕೊಂಡ ಹಲವರಿಗೆ ಕೃತಜ್ಞತಾಪೂರ್ವಕ ಗೌರವವನ್ನು ‘‘ಶಕ್ತಿ’’ ಸಂಸ್ಥೆ ನೀಡಿತು.ನಾರಾಯಣಮೂರ್ತಿ-ಚೆಯ್ಯಂಡಾಣೆ, ವಿ. ಎನ್. ದಿನೇಶ್-ಕಾನೂರು, ಎಂ. ಎ. ವಸಂತ್-ಸುಂಟಿಕೊಪ್ಪ, ಮಂದಪಂಡ ಗಣಪತಿ-ಕೊಳಗದಾಳು, ಎಂ. ಜಿ. ಮಾದಯ್ಯ-ಕಕ್ಕಬೆ.ಎಸ್. ಎಲ್. ಶಿವಣ್ಣ-ಪೊನ್ನಂಪೇಟೆ, ಟಿ.ಜಿ. ಸತೀಶ್-ಮಡಿಕೇರಿ, ವನಿತಾಚಂದ್ರಮೋಹನ್-ಕೊಪ್ಪ, ಕರವಂಡ ಅಪ್ಪಣ್ಣ-ದೊಡ್ಡಪುಲಿಕೋಟು.ಎಂ. ಮುನಿರಾಜು-ಬೆಂಗಳೂರು, ಮಂಡೇಟಿರ ಅನಿಲ್-ಕಾಕೋಟುಪರಂಬು,

ಡಿ. ಎಂ. ರಾಜ್‍ಕುಮಾರ್-ವೀರಾಜಪೇಟೆ.ಹಲೀಮಾ ಬಿ., ಡಿ. ಎಂ. ಹರಿಣಿ, ದಶರಥ,

ಕೆ. ಜಿ. ಸುಬ್ಬಯ್ಯ, ಸಿ. ಎಸ್. ಮಣಿ-ಮಡಿಕೇರಿ.