ಕುಶಾಲನಗರ, ಮಾ. 9: ಈ ಬಾರಿಯ ಏಪ್ರಿಲ್ 1 ರ ದಿನವನ್ನು ಸಂತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲು ಪ್ರತಿಯೊಬ್ಬರು ಸಿದ್ದರಾಗುವಂತೆ ವಿವಿಧ ಮಠಗಳ ಸಂತರು ಕರೆ ನೀಡಿದ್ದಾರೆ. ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ, ಬಸವಶ್ರೀ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ 110ನೇ ಜನ್ಮ ದಿನೋತ್ಸವ ಶೋಭಾಯಾತ್ರೆಯನ್ನು ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸಿದ ಎರಡೂ ಜಿಲ್ಲೆಗಳ ಮಠಾಧೀಶರುಗಳು ಸ್ಥಳೀಯ ಕೊಪ್ಪ ಕಾವೇರಿ ಮಾತೆಯ ಪ್ರತಿಮೆ ಬಳಿ ಮಾತನಾಡಿ, 109 ಸಂವತ್ಸರಗಳನ್ನು ಸಂಪನ್ನಗೊಳಿಸಿ 110ನೇ ಸಂವತ್ಸರಕ್ಕೆ ಪದಾರ್ಪಣೆ ಮಾಡುತ್ತಿರುವ ಅಶಕ್ತರಿಗೆ ಶಕ್ತಿ ನೀಡುತ್ತಿರುವ ದೀನದಲಿತ, ಬಡ, ಅನಾಥ ಮಕ್ಕಳ ಬಾಳಿಗೆ ಭಾಗ್ಯದೇವತೆಯಾಗಿರುವ ಮಹಾಸ್ವಾಮಿಗಳ ಜನ್ಮದಿನವನ್ನು ಸಂತ ದಿನವನ್ನಾಗಿ ಆಚರಿಸುವ ಮೂಲಕ ಗುರುವಂದನೆ ಅರ್ಪಿಸುವಂತಾಗಬೇಕು ಎಂದರು.
ಬೆಟ್ಟದಪುರ ಮಠಾಧೀಶರಾದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿಗಳು, ಕಲ್ಲುಮಠ ಮಹಾಂತ ಸ್ವಾಮಿಗಳು, ತೊರೆನೂರು ಮಠ ಮಲ್ಲೇಶ ಸ್ವಾಮೀಜಿ, ದಿಂಡಗಾಡು ಮಠದ ಅಪ್ಪಾಜಿ ಸ್ವಾಮೀಜಿ ಸೇರಿದಂತೆ ಕುಶಾಲನಗರ ಹಾಗೂ ಪಿರಿಯಾಪಟ್ಟಣ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಮುಖರು ಹಾಸನ ಭಾಗದಿಂದ ಆಗಮಿಸಿದ ಶೋಭಾಯಾತ್ರೆ ರಥವನ್ನು ಧಾರ್ಮಿಕವಾಗಿ ಬರಮಾಡಿಕೊಂಡರು.
ಈ ಸಂದರ್ಭ ಕುಶಾಲನಗರ ಮಹಾಸಭಾದ ಅಧ್ಯಕ್ಷರಾದ ಎಂ.ಎಸ್. ಶಿವಾನಂದ, ಮಧುಸೂದನ್, ನಂಜುಂಡಸ್ವಾಮಿ, ಎನ್.ಎನ್. ಶಂಭುಲಿಂಗಪ್ಪ, ಡಿ.ಎನ್. ಧನರಾಜ್, ಡಿ.ಎನ್. ಸುರೇಶ್, ಮಾಜಿ ಶಾಸಕ ಹೆಚ್.ಸಿ. ಬಸವರಾಜು, ಪಿರಿಯಾಪಟ್ಟಣ ಭಾಗದ ಪ್ರಮುಖರಾದ ಸಿ.ಎಸ್. ಮಂಜುನಾಥ್, ಮಹದೇವಪ್ಪ, ಶಾಂತಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಜೇಂದ್ರ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ, ಸಿ.ಎಸ್. ರೇಣುಕಾ, ಶಿವಯೋಗಿ, ಕೆ.ಎಂ. ಚಂದ್ರಶೇಖರ್ ಮತ್ತಿತರರು ಬರಮಾಡಿಕೊಂಡರು.
ತುಮಕೂರಿನಿಂದ ಪ್ರಾರಂಭ ಗೊಂಡ ರಥಯಾತ್ರೆ ಹಾಸನ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸಿ ಕುಶಾಲನಗರ, ಕೊಪ್ಪ ಮೂಲಕ ಪಿರಿಯಾಪಟ್ಟಣ ನಂತರ ಹುಣಸೂರು ಮೂಲಕ ಮೈಸೂರಿಗೆ ತೆರಳಲಿದೆ. ಏಪ್ರಿಲ್ 1 ರಂದು ತುಮಕೂರು ಸಿದ್ದಗಂಗಾ ಮಠಕ್ಕೆ ಸೇರಲಿರುವ ರಥಯಾತ್ರೆ ರಾಜ್ಯದ 12 ಜಿಲ್ಲೆಗಳಲ್ಲಿ ಶ್ರೀಮಠದ ಇತಿಹಾಸ ಸಾರಲಿದೆ.