ಸೋಮವಾರಪೇಟೆ, ಮಾ. 9: ಹರಿದು ಹಂಚಿ ಹೋಗಿರುವ ತುಳು ಭಾಷಿಕರನ್ನು ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದ ಸಂಘಟನೆ ಮಾಡಲಾಗುತ್ತಿದೆ ಎಂದು ತಾಲೂಕು ತುಳುವೆರ ಜನಪದ ಕೂಟದ ಅಧ್ಯಕ್ಷ ಕೆ.ಪಿ. ದಿನೇಶ್ ಹೇಳಿದರು.
ಇಲ್ಲಿಗೆ ಸಮೀಪದ ಐಗೂರು ಈಶ್ವರ ದೇವಾಲಯದಲ್ಲಿ ನಡೆದ ಐಗೂರು ವಲಯಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು 2 ಲಕ್ಷದಷ್ಟು ತುಳು ಭಾಷಿಕರಿದ್ದರೂ ಸಂಘಟನೆಯ ಕೊರತೆ ಎದುರಿಸುತ್ತಿದ್ದಾರೆ. ಭಾಷಿಕರ ದೈವಾರಾಧನೆ, ಭೂತಾರಾಧನೆ, ಸಂಸ್ಕøತಿಯನ್ನು ಉಳಿಸಿ-ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ಅವುಗಳನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ತಾಲೂಕು ತುಳುವೆರ ಜನಪದ ಕೂಟದ ಸಂಚಾಲಕರಾದ ಸತೀಶ್ ಕುಂದರ್ ಮಾತನಾಡಿ, ಜಿಲ್ಲೆಯಲ್ಲಿ ತುಳು ಭಾಷಿಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘಟನೆ ಮಾಡಲಾಗುತ್ತಿದೆ. ಜನಾಂಗ ಬಾಂಧವರು ಶೈಕ್ಷಣಿಕವಾಗಿ ಸಬಲರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಇದೇ ಸಂದರ್ಭ ಐಗೂರು ವಲಯ ಮಟ್ಟದ ಸಮಿತಿಯನ್ನು ರಚಿಸಲಾಯಿತು. ವೇದಿಕೆಯಲ್ಲಿ ತಾಲೂಕು ಜನಪದ ಕೂಟದ ಪದಾಧಿಕಾರಿಗಳಾದ ದಾಮೋದರ್, ರಾಮಚಂದ್ರ, ವೆಂಕಪ್ಪ, ಆನಂದ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.