ಮಡಿಕೇರಿ, ಮಾ. 9: ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಎಪಿಎಂಸಿಯ ಸದಸ್ಯೆ ಬೊಳ್ಳಾಜ್ಜೀರ ಸುಶೀಲ ಅವರ ನೇತೃತ್ವದಲ್ಲಿ ರೈತ ನೋಂದಣಿ ಕಾರ್ಯಕ್ರಮ ನಡೆಸಲಾಯಿತು.

ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ, ರೈತರು ಉತ್ಪಾದಿಸಿದ ಉತ್ಪನ್ನಗಳಿಗೆ ಆನ್ ಲೈನ್ ಮೂಲಕ ಮಾರುಕಟ್ಟೆ ಸೌಲಭ್ಯ ಪಡೆಯಲು ಪ್ರತಿಯೊಬ್ಬ್ಬ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಹಾಗೂ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವುದರಿಂದ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಬಹುದಾಗಿದೆ ಎಂದು ಕರೆ ನೀಡಿದರು.

ಮಾಜಿ ತಾ.ಪಂ. ಉಪಾಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಮಾತನಾಡಿ ರೈತರಿಗೆ ಉತ್ತಮ ಬೆಲೆ ದೊರೆಯಬೇಕಾದರೆ ಪ್ರತಿಯೊಬ್ಬ್ಬ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದರು. ತಾಲೂಕು ಪಂಚಾಯತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಎಪಿಎಂಸಿ ಸದಸ್ಯರಾದ ನಾಮೇರ ಧರಣಿ, ಜೆ.ಕೆ. ಅಯ್ಯಪ್ಪ, ಕೆ.ಜೆ. ಕುಸುಮ ಹಾಗೂ ಕೊಡವ ಸಮಾಜದ ಅಧ್ಯಕ್ಷ ಅರುಣ್ ಅಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿಬ್ಬಂದಿ ಜಯಂತಿ ಪಿ.ಜಿ. ಮಾತನಾಡಿ ರೈತರು ಹೆಸರು ನೋಂದಾಯಿಸಲು ವಿಳಾಸ, ಆಧಾರ್ ಕಾರ್ಡ್ ಮತ್ತಿತರ ಮಾಹಿತಿಯನ್ನು ನೀಡಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿದ್ದ ಗಣ್ಯರು ಉತ್ಸಾಹಿ ರೈತರಿಗೆ ಪ್ರೋತ್ಸಾಹ ಧನವನ್ನು ವಿತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಕಾರ್ಯಕ್ರಮ ನಿರೂಪಣೆ ಮಾಡಿದರು.