ಮಡಿಕೇರಿ, ಮಾ.9 : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದ ಎಸ್‍ಕೆಎಸ್‍ಎಸ್‍ಎಫ್‍ನ ಕೊಡಗು ಜಿಲ್ಲಾ ಸಮ್ಮೇಳನ ತಾ. 19ರಂದು ವೀರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ತಮ್ಲೀಖ್ ದಾರಿಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ದೇಶದ ರಕ್ಷಣೆಗಾಗಿ ಸಾಮರಸ್ಯದ ಭವ್ಯತೆಯೊಂದಿಗೆ 1989ಲ್ಲಿ ಸ್ಥಾಪಿಸಲ್ಪಟ್ಟ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ದೇಶ ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಧರ್ಮದ ಏಳಿಗೆಗಾಗಿ ಸುನ್ನತ್ ಜಮಾಅತ್‍ನ ಆಶಯ ಆದರ್ಶಗಳಲ್ಲಿ ನೆಲೆ ನಿಂತು ಪರಂಪರಾಗತವಾಗಿ ಸಾಗಿ ಬಂದು ಇದೀಗ ‘ಮದೀನಾ ಪಾಷನ್’ ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ತಾ. 19ರಂದು ವೀರಾಜಪೇಟೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯ ಹುದೈವಿಯ ನಗರದಲ್ಲಿ ನಡೆಯಲಿರುವ ಸಮ್ಮೇಳನದ ಅಂಗವಾಗಿ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಅಧ್ಯಯನ ಶಿಬಿರಗಳು, ಚರ್ಚಾ ವೇದಿಕೆಗಳು, ಗೃಹ ಸಂದರ್ಶನ ಕಾರ್ಯಕ್ರಮಗಳು, ಆತ್ಮೀಯ ಸಭೆಗಳು ನಡೆಯಲಿವೆ.

ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹಮೀದ್ ಆಲಿ ಶಿಹಾಬ್ ತಂಞಳ್, ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್, ವಾಗ್ಮಿ ಅಬ್ದುಲ್ ಸಮದ್ ಪೋಕೊಟ್ಟೂರ್, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಉಸ್ತಾದ್, ಕೇಂದ್ರ ಮುಷಾವರ ಸದಸ್ಯ ಎಂ.ಎ.ಖಾಸಿಂ ಮುಸ್ಲಿಯಾರ್, ಕೊಡಗಿನ ಖಾಝಿ ಪೂಕ್ಕಳಂ ಅಬ್ದುಲ್ಲಾ ಉಸ್ತಾದ್, ಉಪ ಖಾಝಿ ಎಂ.ಎ. ಅಬ್ದುಲ್ಲಾ ಫೈಝಿ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ಅನೀಸ್ ಕೌಸರಿ, ಆಸಿಫ್ ಧಾರಿಮಿ ಪುಲಿಕಲ್ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಜಿಲ್ಲಾ ಸಂಚಾಲಕ ವೈ.ಎಂ.ಉಮ್ಮರ್‍ಫೈಝಿ, ಸಹ ಸಂಚಾಲಕ ಪಿ.ಎಂ.ಆರಿಫ್‍ಫೈಝಿ, ಎಸ್‍ಕೆಎಸ್‍ಎಸ್‍ಎಫ್‍ನ ಜಿಲ್ಲಾ ಸಮಿತಿ ಉಪಾಧ್ಯಕ್ಷ ರಶೀದ್ ದಾರಿಮಿ, ಹಾಗೂ ವಿಖಾಯ ಸಮಿತಿಯ ಸಂಚಾಲಕ ಅಬ್ದುಲ್ ಕರೀಮ್ ಮುಸ್ಲಿಯಾರ್ ಉಪಸ್ಥಿತರಿದ್ದರು.