ಮಡಿಕೇರಿ, ಮಾ. 9: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2016 ನೇ ಸಾಲಿನ ಟೀಯೆಸ್ಸಾರ್ ಹಾಗೂ ಮೊಹರೆ ಹಣಮಂತರಾಯ, ಪರಿಸರ ಪತ್ರಿಕೋದ್ಯಮ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಟೀಯೆಸ್ಸಾರ್ ಪ್ರಶಸ್ತಿಯನ್ನು ಕನ್ನಡದ ಹಿರಿಯ ಪತ್ರಕರ್ತ ಟಿ.ಎಸ್.ರಾಮಚಂದ್ರರಾವ್ ಅವರ ನೆನಪಿನಲ್ಲಿ ಸರ್ಕಾರ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತ 1 ಲಕ್ಷ ರೂ. ಆಗಿದ್ದು, ಕನ್ನಡ ಪತ್ರಿಕೋದ್ಯಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕನಿಷ್ಠ 30 ವರ್ಷಗಳ ಸೇವೆ ಸಲ್ಲಿಸಿರುವವರನ್ನು ಪರಿಗಣಿಸಲಾಗುವದು. ಒಬ್ಬರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುವದು.

ಪತ್ರಿಕಾರಂಗದ ಬೀಷ್ಮರೆಂದೇ ಹೆಸರಾದ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿದವರು ಅರ್ಹರು. ಪ್ರಶಸ್ತಿ ಮೊತ್ತ 1 ಲಕ್ಷ ರೂ.

ರಾಜ್ಯದೆಲ್ಲೆಡೆ ಅಭಿವೃದ್ಧಿಗೆ ಉತ್ತಮ ವಾತಾವರಣ ಕಲ್ಪಿಸಲು ಅನುಕೂಲ ವಾಗುವಂತೆ ಉತ್ತೇಜಿಸಲು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ರಾಜ್ಯದಲ್ಲಿನ ಪರಿಸರ, ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗಾಗಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 10 ವರ್ಷ ಅನುಭವ ಹೊಂದಿರುವ ಪತ್ರಕರ್ತರು ಅರ್ಹರಾಗಿರುತ್ತಾರೆ. ಪ್ರಶಸ್ತಿ ತಲಾ ರೂ. 50 ಸಾವಿರ ಒಳಗೊಂಡಿದೆ.

ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲಾತಿಗಳೊಂದಿಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ, ನಂ. 17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು - 560 001 ಗೆ ತಾ.25 ರೊಳಗಾಗಿ ಕಳುಹಿಸಿಕೊಡಲು ಕೋರಲಾಗಿದೆ.