ಭಾಗಮಂಡಲ, ಮಾ. 9: ಭಾಗಮಂಡಲದ ವಾಹನ ಚಾಲಕ ಮತ್ತು ಮಾಲಿಕರ ಸಂಘದ ವತಿಯಿಂದ ಶಿವರಾತ್ರಿ ಪ್ರಯುಕ್ತ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕಾವೇರಿ ಕಾಲೇಜಿನ ಉಪನ್ಯಾಸಕ ದಿವಾಕರ್ ಮಾತನಾಡಿ ಶಿವರಾತ್ರಿ ಹಬ್ಬವು ಉಳಿದೆಲ್ಲ ಹಬ್ಬಗಳಿಗಿಂತ ವಿಶೇಷ ವಿಭಿನ್ನ ಹಬ್ಬವಾಗಿದ್ದು ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವ ತಿಳಿಸಲಿವೆ ಎಂದರು.
ವಕೀಲ ಸುನಿಲ್‍ಪತ್ರಾವೊ ಮಾತನಾಡಿ ಧಾರ್ಮಿಕ ಆಚರಣೆಯ ಜೊತೆಗೆ ಸಂಗೀತವು ಮನಸ್ಸಿನ ಚಿಂತೆಯನ್ನು ದೂರಮಾಡಲಿದೆ ಎಂದರು. ಚೆಟ್ಟಿಮಾನಿ ಗ್ರಾಮಪಂಚಾಯಿತಿ ಸದಸ್ಯ ಹ್ಯಾರಿಸ್ ಮಾತನಾಡಿ ಧಾರ್ಮಿಕ ಕೇಂದ್ರದಲ್ಲಿ ನಾವು ಮೊದಲು ಪರಿಸರದ ಶುಚಿತ್ವದ ಕಡೆಗೆ ಗಮನ ಹರಿಸಬೇಕು. ಹಾಗಿದ್ದಾಗ ಧಾರ್ಮಿಕ ಕೇಂದ್ರವು ತೀರ್ಥಕ್ಷೇತ್ರವಾಗಿ ಉಳಿಯಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೃತ್ತ ನಿರೀಕ್ಷಕ ದಿಲೀಪ್ ಮಾತನಾಡಿ ಇಂದು ಆಕಸ್ಮಿಕ ಅಪಘಾತಗಳಿಗೆ ಸಿಲುಕಿ ಜನ ಸಾಮಾನ್ಯರು ನರಳುತ್ತಿದ್ದಾರೆ. ವಾಹನ ಚಾಲಕರು ಕಾನೂನು ರೀತಿಯಲ್ಲಿ ದಾಖಲೆಗಳನ್ನು ಹೊಂದಿ ವಾಹನಗಳನ್ನು ಚಲಾಯಿಸಬೇಕು ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನಿಲ್ ಆಳ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಕುಮಾರ್ ಆಟೋ ಮಾಲೀಕರ ಸಂಘದ ಅಧ್ಯಕ್ಷ ದೇವಗುಂಡಿ ಭಾಸ್ಕರ್, ತೀರ್ಥ ರಾಮ ಎಸ್.ಐ. ಸದಾಶಿವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಸದಸ್ಯ ಸುನೀತಾ ಜ್ಞಾನೋದಯ ಶಾಲೆಯ ಮುಖ್ಯ ಶಿಕ್ಷಕಿ ಶ್ವೇತಾ ಚೆಂಗಪ್ಪ ಉಪಸ್ಥಿತರಿದ್ದರು.