ಮಡಿಕೇರಿ, ಮಾ. 9: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲಕ ಅಧಿಕಾರ ವಿಕೇಂದ್ರಿಕರಣಕ್ಕೆ ಬೆಂಬಲ ನೀಡುವದು ಮತ್ತು ಪಂಚಾಯಿತಿ ಪ್ರತಿನಿಧಿಗಳ ಸಬಲೀಕರಣದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ಹಾಗೂ ಕಾಂಗ್ರೆಸ್ ಪ್ರಮುಖ ತೆನ್ನಿರ ಮೈನಾ ತಿಳಿಸಿದ್ದಾರೆ.
ಮೇಕೇರಿ ಗ್ರಾಮದಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿದ ಅವರು ಪ್ರತಿ ಗ್ರಾಮದ ಪ್ರಗತಿ ಆಯಾ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸ್ಥಳೀಯ ಸುಭಾಷ್ ನಗರದ ನಿವಾಸಿ ಹೆಚ್.ಸಿ. ಪೊನ್ನಪ್ಪ ಅವರ ಮನೆಯ ಅಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಪಿಯುಶ್ ಪರೇರ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೇಕೇರಿ ಹನೀಫ್, ಓಡಿಯನ ಸದಾನಂದ, ಓಡಿಯನ ಭೀಮಯ್ಯ, ಬಾಬುರಾಜ್, ಚಂದ್ರಶೇಖರ್, ಫ್ರಾನ್ಸಿಸ್ ಎಂ.ಪಿ., ಜಯರಾಂ ಹೆಚ್.ಎ., ಅಪ್ಪಣ್ಣ, ಅನಿಶ್, ಓಡಿಯನ ಸೋಮಣ್ಣ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.