ಶನಿವಾರಸಂತೆ, ಮಾ. 9: ನಿವೃತ್ತ ಸೈನಿಕರನ್ನು ಮಾಜಿ ಎಂದು ಕರೆಯುತ್ತಾರೆ. ಆದರೆ, ಅವರೆಂದಿಗೂ ನಿವೃತ್ತರಾಗದೆ ಜೀವಮಾನದಲ್ಲಿ ಸೈನಿಕರಾಗಿಯೆ ಗುರುತಿಸಲ್ಪಡುತ್ತಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಗೀತಾ ಎಂ. ಶೆಟ್ಟಿ ಅಭಿಪ್ರಾಯಪಟ್ಟರು.

ಸ್ಥಳೀಯ ನಿವೃತ್ತ ಸೈನಿಕರ ಸಂಘದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಓರ್ವ ನಿವೃತ್ತ ಸೈನಿಕ ತನ್ನೆಲ್ಲಾ ದಾಖಲಾತಿಗಳನ್ನು ಆಗಾಗ್ಗೆ ವಿಮರ್ಶಿಸಿಕೊಳ್ಳುತ್ತಿರಬೇಕು ಎಂದರು.

ಮುಖ್ಯ ಅತಿಥಿ ನಿವೃತ್ತ ಸೈನಿಕ ಚಂಗಪ್ಪ ಮಾತನಾಡಿ, ನಿವೃತ್ತ ಸೈನಿಕರದು ಶಿಸ್ತಿನ ಜೀವನ. ನಂಬಿಕೆಗೆ, ಗೌರವಕ್ಕೆ ಅರ್ಹರಾಗಿರುತ್ತಾರೆ. ಸೈನಿಕರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಸೈನಿಕರಾದ ಈರಪ್ಪ ಸುಬೇದಾರ್ ಹಾಗೂ ನಿವೃತ್ತ ಸೈನಿಕ ಎಸ್.ಎನ್. ಪಾಂಡು ಮಾತನಾಡಿದರು.

ನಿವೃತ್ತ ಸೈನಿಕರಾದ ಕೇಶವ, ಭೈರಪ್ಪ, ಎ.ಎಸ್. ಮಹೇಶ್, ಗಣೇಶ್ ಅವರುಗಳನ್ನು ಗೌರವಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಸೈನಿಕ ಕುಟುಂಬದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಹೆಚ್.ಎನ್. ಗಣಪಯ್ಯ, ಎಂ.ಎನ್. ಪೊನ್ನಪ್ಪ, ಬಿ.ಎಸ್. ಮಹೇಶ್, ಹೆಚ್.ಎನ್. ಸಂದೀಪ್, ಜಯಕುಮಾರ್ ಮತ್ತಿತರರು ಹಾಜರಿದ್ದರು.