ಆಲೂರುಸಿದ್ದಾಪುರ, ಮಾ. 9: ಹಾಸ್ಟೆಲ್‍ವೊಂದಕ್ಕೆ ಜಿ.ಪಂ. ಸದಸ್ಯರೊಬ್ಬರು ದಿಢೀರ್ ಭೇಟಿನೀಡಿದ ವೇಳೆಯಲ್ಲಿ ಹಾಸ್ಟೆಲ್ ವಾರ್ಡನ್ ಜಿ.ಪಂ. ಸದಸ್ಯರನ್ನು ಗಂಟೆಗಟ್ಟಲೆ ಕಾಯಿಸಿ ಬೇಜವಾಬ್ದಾರಿ ಪ್ರದರ್ಶಿಸಿದ ಘಟನೆ ಬುಧವಾರ ಆಲೂರುಸಿ ದ್ದಾಪುರದಲ್ಲಿ ನಡೆದಿದೆ.ಆಲೂರುಸಿದ್ದಾಪುರ ಬಾಲಕರ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಮ್ಮಿ ಇದ್ದರೂ ದಾಖಲಾತಿಯಲ್ಲಿ ಅಧಿಕ ಹಾಜರಾತಿಯನ್ನು ನಮೋದಿಸುವದು ಹಾಗೂ ವಸತಿ ನಿಲಯದ ನಿರ್ವಹಣೆಯಲ್ಲಿ ನ್ಯೂನತೆಗಳಿರುವ ಬಗ್ಗೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯೆ ಸರೋಜಮ್ಮ ಅವರಿಗೆ ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರು ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ (ಮೊದಲ ಪುಟದಿಂದ) ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದರು.

ಆದರೆ ಈ ವೇಳೆಯಲ್ಲಿ ನಿಲಯದ ವಾರ್ಡನ್ ಆಗಿ ಕರ್ತವ್ಯನಿರ್ವಹಿಸುತ್ತಿರುವ ಚಿಣ್ಣಪ್ಪ ಇರಲಿಲ್ಲ. ನಂತರ ಜಿ.ಪಂ. ಸದಸ್ಯೆ ಸರೋಜಮ್ಮ ವಸತಿ ನಿಲಯದ ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಪುಸ್ತಕವನ್ನು ಪರಿಶೀಲಿಸಿದಾಗ ದಾಖಲೆಯಲ್ಲಿ 60 ವಿದ್ಯಾರ್ಥಿಗಳಿರುವದು ಕಂಡುಬಂದಿತು, ಆದರೆ ವಸತಿ ನಿಲಯದಲ್ಲಿ 36 ವಿದ್ಯಾರ್ಥಿಗಳಿರುವದನ್ನು ಗಮನಿಸಿದರು. ಈ ಕುರಿತು ಅವರು ವಸತಿ ನಿಲಯದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ವಸತಿ ನಿಲಯದಲ್ಲಿ 36 ವಿದ್ಯಾರ್ಥಿಗಳಿರುವ ಬಗ್ಗೆ ತಿಳಿದುಕೊಂಡರು. ಈ ಕುರಿತು ಜಿ.ಪಂ. ಸದಸ್ಯರು ತಕ್ಷಣ ವಾರ್ಡನ್‍ಗೆ ದೂರವಾಣಿ ಕರೆ ಮಾಡಿ ಹಾಸ್ಟೆಲ್‍ಗೆ ಬರುವಂತೆ ಸೂಚಿಸಿದ್ದಾರೆ. ಆಗ ವಾರ್ಡನ್ ನಾನು ಹೊರಗಡೆ ಇದ್ದೇನೆ, ನಾನು ಮಧ್ಯಾಹ್ನ 12 ಗಂಟೆಗೆ ಬರುತ್ತೇನೆ, ನೀವು ಅಲ್ಲೆ ಕಾಯುತ್ತಿರಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

ಈ ಬಗ್ಗೆ ಸರೋಜಮ್ಮ ಜಿಲ್ಲಾ ಬಿಸಿಎಂ ಇಲಾಖೆಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಬಿಸಿಎಂ ಅಧಿಕಾರಿಯವರು ವಾರ್ಡನ್‍ಗೆ ಕರೆ ಮಾಡಿ ತಕ್ಷಣ ವಸತಿ ನಿಲಯಕ್ಕೆ ತೆರಳಿ ಜಿ.ಪಂ. ಸದಸ್ಯರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಇಷ್ಟಾದರೂ ಕೂಡ ವಾರ್ಡ್‍ನ್ ಇತ್ತ ಸುಳಿಯಲಿಲ್ಲ. ಕೊನೆಗೆ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ವಾರ್ಡನ್ ಚಿಣ್ಣಪ್ಪ ಜಿ.ಪಂ. ಸದಸ್ಯರು ಕಾದು ವಾಪಾಸ್ಸು ಮನೆಗೆ ಹೋಗಿರಬೇಕೆಂದು ಭಾವಿಸಿ ವಸತಿ ನಿಲಯಕ್ಕೆ ಬಂದಾಗ ಅಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ ಕುಳಿತಿರುವದನ್ನು ನೋಡಿ ಗಾಬರಿಯಾದರು.

ನಂತರ ಜಿ.ಪಂ. ಸದಸ್ಯರು ವಾರ್ಡನ್‍ನನ್ನು ತರಾಟೆಗೆ ತೆಗೆದುಕೊಂಡರು. ವಸತಿ ನಿಲಯದ ನಿರ್ವಹಣೆಯ ದಾಖಲಾತಿ, ಆಹಾರ ಪೂರೈಕೆ ಸೇರಿದಂತೆ ಹಲವಾರು ದಾಖಲಾತಿಗಳ ವಿವರವನ್ನು ಕೇಳಿದಾಗ ವಾರ್ಡನ್ ಇಲ್ಲಿ ಯಾವದೆ ಕಡತಗಳಿಲ್ಲ. ನಾವು ವಸತಿ ನಿಲಯವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಬೇಜವಾಬ್ದಾರಿಯಿಂದ ಉತ್ತರ ನೀಡಿದ್ದಾರೆ. ಕೊನೆಗೆ ಜಿ.ಪಂ. ಸದಸ್ಯೆ ಸರೋಜಮ್ಮ ವಿಸಿಟಿಂಗ್ ಪುಸ್ತಕದಲ್ಲಿ ಸದರಿ ವಸತಿ ನಿಲಯದಲ್ಲಿ 36 ವಿದ್ಯಾರ್ಥಿಗಳಿರುವದು, ವಸತಿ ನಿಲಯಕ್ಕೆ ಸಂಬಂಧಪಟ್ಟಂತಹ ನಿರ್ವಹಣೆ ದಾಖಲಾತಿ, ಆಹಾರ ಪೂರೈಕೆ ಇನ್ನಿತರ ದಾಖಲಾತಿಯನ್ನು ವಾರ್ಡನ್ ನಿರ್ವಹಣೆ ಮಾಡುತ್ತಿಲ್ಲ ಎಂದು ದಾಖಲಿಸಿದರು. ಸದರಿ ವಸತಿ ನಿಲಯದ ಎಲ್ಲಾ ನ್ಯೂನತೆಗಳ ಬಗ್ಗೆ ಸರಕಾರಕ್ಕೆ ವರದಿ ನೀಡಲಾಗುವದೆಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಸದಸ್ಯ ಗಂಗಾಧರ್, ಎಸ್‍ಡಿಎಂಸಿ ಅಧ್ಯಕ್ಷ ಸುರೇಂದ್ರ ಇದ್ದರು.

ವರದಿ: ದಿನೇಶ್ ಮಾಲಂಬಿ