*ಸಿದ್ದಾಪುರ, ಮಾ. 9: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ಪೌರಕಾರ್ಮಿಕರೊಂದಿಗೆ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ಪಟ್ಟಣ ನಿವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ತ್ಯಾಜ್ಯ ವಿಲೇವಾರಿ ಮತ್ತು ಕಸ ಶೇಖರಿಸಲು ಶಾಶ್ವತ ಪರಿಹಾರ ಕಾಣದೇ ಕಂಗೆಟ್ಟಿರುವ ಸಿದ್ದಾಪುರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ.

ಗ್ರಾಮ ಪಂಚಾಯಿತಿ ಆಡಳಿತಕ್ಕೆ ಇಲ್ಲಿನ ಕಸ ವಿಲೇವಾರಿ ಮಾಡುವದೇ ಸಮಸ್ಯೆಯಾಗಿದೆ. ಟ್ರ್ಯಾಕ್ಟರ್ ಬಳಸಿ ಪಟ್ಟಣದ ಕಸ ಸಂಗ್ರಹಿಸುತ್ತಿದ್ದು, ಕೆಲ ದಿನಗಳು ಕಸ ಸಂಗ್ರಹಿಸಲು ಪೌರ ಕಾರ್ಮಿಕರ ಕೊರತೆ ಇರುತ್ತದೆ. ಪೌರಕಾರ್ಮಿಕರು ಇದ್ದಲ್ಲಿ ಟ್ರ್ಯಾಕ್ಟರ್ ಚಾಲಕನ ಗೈರು ಹಾಜರಿ ಇರುತ್ತದೆ, ಇವರೆಡೂ ಇರುವಾಗ ಟ್ರ್ಯಾಕ್ಟರ್ ದುರಸ್ತಿ ಎಂಬ ನೆಪ ಹೇಳಲಾಗುತ್ತದೆ.

ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಲು ಕೆಲ ಪೌರಕಾರ್ಮಿಕರು ಮತ್ತು ಟ್ರ್ಯಾಕ್ಟರ್ ಚಾಲಕ ಗೈರುಹಾಜರಾದ ಹಿನ್ನಲೆಯಲ್ಲಿ ಇತ್ತೀಚೆಗೆ ಸ್ವತಃ ಗ್ರಾಮ ಪಂಚಾಯಿತಿ ಆಧ್ಯಕ್ಷ ಮಣಿ ಮತ್ತು ಗ್ರಾಮಾಭಿವೃದ್ಧಿ ಅಧಿಕಾರ ವಿಶ್ವನಾಥ್ ಕೆಲ ಪೌರಕಾರ್ಮಿಕರೊಂದಿಗೆ ಪಟ್ಟಣದಲ್ಲಿ ತ್ಯಾಜ್ಯ ಸಂಗ್ರಹಿಸಲು ಮಂದಾದರು.

ಅಧ್ಯಕ್ಷರು ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ಟ್ರ್ಯಾಕ್ಟರ್ ಚಾಲಿಸಿ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿದರು.