ಪೊನ್ನಂಪೇಟೆ, ಮಾ. 9: ಅಮ್ಮತ್ತಿಯ ಚೌಡೇಶ್ವರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಾರ್ವಜನಿಕರಿಗಾಗಿ ಪ್ರಥಮ ವರ್ಷದ ರಾಜ್ಯ ಮಟ್ಟದ ಪುರುಷರ ಮುಕ್ತ ಫುಟ್ಬಾಲ್ ಪಂದ್ಯಾವಳಿ ‘ಅಂಬೇಡ್ಕರ್ ಕಪ್ 2017’ಅನ್ನು ಮುಂದಿನ ತಿಂಗಳ 14ರಿಂದ 16ರವರೆಗೆ ಅಮ್ಮತ್ತಿಯಲ್ಲಿ ಆಯೋಜಿಸಲಾಗಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಗೌರವಾಧ್ಯಕ್ಷರಾದ ಅರುಣ್ ಅಮ್ಮತ್ತಿ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 ದಿನಗಳ ಕಾಲ ಅಮ್ಮತ್ತಿಯ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈ ಪಂದ್ಯಾವಳಿಯ ಎಲ್ಲಾ ಸಿದ್ಧತಾ ಕಾರ್ಯಗಳು ಇದೀಗ ಆರಂಭಗೊಂಡಿದೆ. ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ಯೊಂದನ್ನು ಆಯೋಜಿಸುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೂಪು- ರೇಷೆಗಳನ್ನು ಸಿದ್ದಪಡಿಸಲಾಗಿದೆ ಎಂದು ಅರುಣ್ ಅವರು ವಿವರಿಸಿದರು.

ಪಂದ್ಯಾವಳಿಯಲ್ಲಿ ಗರಿಷ್ಠ 7 ಆಟಗಾರರು ಮಾತ್ರ ಭಾಗವಹಿಸ ಬಹುದಾಗಿದೆ. ಜೊತೆಗೆ ತಂಡದಲ್ಲಿ ಹೆಚ್ಚುವರಿ 2 ಆಟಗಾರರು ಇರಬಹುದಾಗಿದೆ. ತಂಡದಲ್ಲಿ ಅತಿಥಿ ಆಟಗಾರರಿಗೂ ಅವಕಾಶ ಕಲ್ಪಿಸಲಾಗಿದೆ. ಪಾಲ್ಗೊಳ್ಳುವ ತಂಡದ ಆಟಗಾರರಿಗೆ ಯಾವದೇ ಭತ್ಯೆಯನ್ನು ಮತ್ತು ವಸತಿ ಸೌಲಭ್ಯವನ್ನು ನೀಡಲಾಗುವದಿಲ್ಲ. ಕೊಡಗು ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್‍ನ ನೋಂದಾಯಿತ ತೀರ್ಪುಗಾರರು ಮಾತ್ರ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಭಾರತೀಯ ಫುಟ್ಬಾಲ್ ಒಕ್ಕೂಟ (ಫೀಫಾ)ದ ನಿಯಮಾನುಸಾರವೇ ಈ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದ ಅರುಣ್ ಅಮ್ಮತ್ತಿ ಅವರು, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನದಲ್ಲಿ ವಿಜಯಿಯಾಗುವ ತಂಡಕ್ಕೆ ರೂ.30 ಸಾವಿರ ನಗದು ಬಹುಮಾನದ ಜೊತೆಗೆ ಆಕರ್ಷಕ ಪಾರಿತೋಷಕ ಹಾಗೂ ದ್ವಿತೀಯ ಸ್ಥಾನದಲ್ಲಿ ವಿಜಯಿಯಾಗುವ ತಂಡಕ್ಕೆ ರೂ. 20 ಸಾವಿರ ನಗದು ಬಹುಮಾನದ ಜೊತೆಗೆ ಆಕರ್ಷಕ ಪಾರಿತೋಷಕವನ್ನು ನೀಡಲಾಗುವದು. ಅಲ್ಲದೇ ವಿಜೇತ ತಂಡದ ಎಲ್ಲಾ ಆಟಗಾರರಿಗೂ ವೈಯಕ್ತಿಕ ಟ್ರೋಫಿ ಯನ್ನು ನೀಡಿ ಗೌರವಿಸಲಾಗುವದು ಎಂದು ತಿಳಿಸಿದರು.

ರಾಜ್ಯ ಮಟ್ಟದ ಈ ಪಂದ್ಯಾವಳಿಗಾಗಿ 2 ಲಕ್ಷಕ್ಕೂ ಅಧಿಕ ವೆಚ್ಚವಾಗಲಿದೆ. ಇದಕ್ಕಾಗಿ ಜಿಲ್ಲೆಯ ಕ್ರೀಡಾ ಪ್ರೇಮಿಗಳನ್ನು ಮತ್ತು ದಾನಿಗಳನ್ನೇ ಅವಲಂಭಿಸಲಾಗಿದೆ. ಪಂದ್ಯಾವಳಿಯ ಪ್ರಥಮ ಸ್ಥಾನದ ಪಾರಿತೋಷಕವನ್ನು ಅಮ್ಮತ್ತಿಯ ಪ್ರಸಿದ್ಧ ಮೋರಿವಾದಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಹೆಚ್.ಕೆ. ನರಸಯ್ಯ ಮತ್ತು ದ್ವಿತೀಯ ಸ್ಥಾನದ ಪಾರಿತೋಷಕವನ್ನು ಅಮ್ಮತ್ತಿಯ ಹೆಚ್.ಕೆ. ಶ್ರೀನಿವಾಸ್ ಪ್ರಾಯೋಜಿಸಿ ದ್ದಾರೆ ಎಂದು ಮಾಹಿತಿ ನೀಡಿದ ಅರುಣ್ ಅಮ್ಮತ್ತಿ ಅವರು, ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯನ್ನು ಮತ್ತಷ್ಟು ಉತ್ತೇಜಿಸಿ ಅಭಿವೃದ್ಧಿಪಡಿಸುವ ಹಿನೆÀ್ನಲೆಯಲ್ಲಿ ಈ ಪಂದ್ಯಾವಳಿಯನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸ ಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಉದಯೋನ್ಮುಖ ಫುಟ್ಬಾಲ್ ಆಟಗಾರರಿದ್ದು, ಅವರನ್ನೂ ಪ್ರೋತ್ಸಾಹಿಸುವ ಉದ್ದೇಶವೂ ಈ ಪಂದ್ಯಾವಳಿ ಆಯೋಜನೆಯಲ್ಲಿ ಅಡಗಿದೆ ಎಂದು ಹೇಳಿದರು.

ಕಳೆದ 32 ವರ್ಷಗಳ ಹಿಂದೆಯೇ ಅಮ್ಮತ್ತಿಯ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘವನ್ನು ಸ್ಥಳೀಯರಾದ ವೆಂಕಟೇಶ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಸಂಘದ ವತಿಯಿಂದ ಕಳೆದ ಹಲವಾರು ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕವಾದ ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಕಳೆದ 2 ವರ್ಷಗಳಿಂದ ಜಿಲ್ಲೆಯ ದಲಿತರಿಗಾಗಿ ‘ಭೀಮಾ ಕಪ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ತಿಳಿಸಿದ ಅರುಣ್ ಅವರು, ಮುಂಬರುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ‘ಅಂಬೇಡ್ಕರ್ ಕಪ್ 2017’ರ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಗಳಾದ 9449747742, 9482644300 ಅಥವಾ 7411822179 ಅನ್ನು ಸಂಪರ್ಕಿಸ ಬಹುದಾಗಿದೆ ಎಂದು ಹೇಳಿದ್ದಾರೆ. ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹೆಚ್.ಎ ಅಭಿಜಿತ್, ಸಹ ಕಾರ್ಯದರ್ಶಿ ಹೆಚ್.ಹೆಚ್. ಮಿಥುನ್ ಮತ್ತು ಕೋಶಾಧಿಕಾರಿ ಹೆಚ್.ಜಿ. ಮಧು ಮೊದಲಾದವರು ಉಪಸ್ಥಿತರಿದ್ದರು.