ಸೋಮವಾರಪೇಟೆ, ಮಾ. 9: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಲು 15 ದಿನಗಳ ಕಾಲ ಗಡುವು ನೀಡಲಾಗಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಡವರು, ಕೂಲಿ ಕಾರ್ಮಿಕರು, ರೈತರು ಹೆಚ್ಚಾಗಿ ವಾಸಿಸುತ್ತಿರುವ ಸೋಮವಾರಪೇಟೆಯಲ್ಲಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ಪರದಾಟ ಅನುಭವಿಸುತ್ತಿದ್ದಾರೆ. 12 ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ 4 ಮಂದಿ ವೈದ್ಯರು, ಓರ್ವ ಮುಖ್ಯ ವೈದ್ಯಾಧಿಕಾರಿ ಇದ್ದಾರೆ. 6 ಮಂದಿ ಶುಶ್ರೂಷಕಿಯರು, 8 ಮಂದಿ ಡಿ ಗ್ರೂಪ್ ನೌಕರರ ಕೊರತೆ ಇದೆ. ಕಳೆದ ಒಂದು ವರ್ಷದಿಂದ ಆಂಬ್ಯುಲೆನ್ಸ್ ಸ್ಥಗಿತಗೊಂಡಿದೆ. 2 ಚಾಲಕ ಹುದ್ದೆ ಖಾಲಿ ಇದೆ. ನೂತನ ಜನರೇಟರ್ ತುಕ್ಕು ಹಿಡಿಯುತ್ತಿದ್ದು, ಈಗಿರುವ ಜನರೇಟರ್‍ನಿಂದ ಕ್ಷ-ಕಿರಣ ಹಾಗೂ ಇತರ ಸೌಲಭ್ಯಗಳಿಗೆ ವಿದ್ಯುತ್ ಕೊರತೆ ಎದುರಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ದೀಪಕ್ ಆರೋಪಿಸಿದರು. ಆಸ್ಪತ್ರೆಗೆ ಕನಿಷ್ಟ 7 ಮಂದಿ ವೈದ್ಯರನ್ನು ನಿಯೋಜಿಸಬೇಕು. ಸ್ತ್ರೀ ರೋಗ, ಅರೆವಳಿಕೆ ತಜ್ಞರು, ಫಿಜಿಷಿಯನ್‍ರನ್ನು ಕಡ್ಡಾಯವಾಗಿ ನೇಮಿಸಬೇಕು. 12 ಮಂದಿ ಶುಶ್ರೂಷಕಿಯರು, 8 ಮಂದಿ ಡಿ.ಗ್ರೂಪ್ ನೌಕರರನ್ನು ನಿಯೋಜಿಸಬೇಕು. ಈರ್ವರು ತುರ್ತು ವಾಹನ ಚಾಲಕರನ್ನು ನೇಮಿಸಬೇಕು. ಡಯಾಲಿಸೀಸ್ ಘಟಕಕ್ಕೆ ನುರಿತ ವೈದ್ಯರ ನೇಮಕದೊಂದಿಗೆ ತಕ್ಷಣ ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ.