(ವರದಿ: ದಿನೇಶ್ ಮಾಲಂಬಿ)

ಆಲೂರುಸಿದ್ಧಾಪುರ, ಮಾ. 9: ದುಂಡಳ್ಳಿ ವ್ಯಾಪ್ತಿಯಲ್ಲಿ ಹರಿಯುವ ಕಾಜೂರು ಹೊಳೆ ಈ ಭಾಗದ ರೈತರ ಪಾಲಿಗೆ ಜಲ ಸಂಪನ್ಮೂಲ ಒದಗಿಸಿಕೊಡುವ ವರ್ಷಧಾರೆಯಾಗಿ ಹರಿಯುತ್ತದೆ. ಈ ಹೊಳೆಯನ್ನು ನಂಬಿಕೊಂಡು ಸಾವಿರಾರು ರೈತರು ವ್ಯವಸಾಯ ಮಾಡುತ್ತಾರೆ, ಜಾನುವಾರುಗಳು ಈ ಹೊಳೆಯಲ್ಲಿ ದಾಹ ನೀಗಿಸಿಕೊಳ್ಳುತ್ತವೆ. ಈ ವರ್ಷದ ಬಿಸಿಲಿನ ತಾಪಕ್ಕೆ ಈ ಹೊಳೆ ಬತ್ತಿ ಹೋಗಿದೆ, ಇದರಿಂದ ಬೇಸಿಗೆಯಲ್ಲಿ ಹೊಳೆಯ ನೀರನ್ನು ನಂಬಿ ವ್ಯವಸಾಯ ಮಾಡುವ ಕೃಷಿಕರು ತತ್ತರಿಸಿ ಹೋಗಿದ್ದಾರೆ, ರೈತರು ಗದ್ದೆಗಳಲ್ಲಿ ಮಾಡಿರುವ ಕೃಷಿ ಬೆಳೆಗಳು ಒಣಗಿ ಹೋಗುತ್ತಿದೆ ಹಲವರು ತಮ್ಮ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಹಲವಾರು ವರ್ಷಗಳಿಂದ ಬತ್ತಿ ಹೋಗದ ಕಾಜೂರು ಹೊಳೆ ಈ ವರ್ಷ ಫೆಬ್ರವರಿ ತಿಂಗಳಲ್ಲೆ ಬತ್ತಿ ಹೋಗಿದೆ.

ಈ ಹೊಳೆ ಸೋಮವಾರಪೇಟೆ ತಾಲೂಕಿನಲ್ಲಿರುವ ಪಶ್ಚಿಮಘಟ್ಟ ಬೆಟ್ಟಸಾಲಿನ ತಾಕೇರಿ ಗ್ರಾಮದ ಜೇನರಕೊಪ್ಪಲು ಬಳಿ ಹುಟ್ಟಿ ಚಿಕ್ಕತೋಳೂರು, ಸಕಲೇಶಪುರ ತಾಲೂಕಿಗೆ ಸೇರಿದ ಹೊಸೂರು ಮೂಲಕ ಜಿಲ್ಲೆಗೆ ಸೇರಿದ ದೊಡ್ಡಕೊಳತ್ತೂರು ಮಾರ್ಗ ಕಾಜೂರು, ಕೂಜಿಗೆರೆ, ಬೆಂಬಳೂರು, ಕ್ಯಾತೆ, ಯಸಳೂರು ವ್ಯಾಪ್ತಿಯಲ್ಲಿ ಹರಿದು ಹೇಮಾವತಿ ನದಿಯನ್ನು ಸೇರುತ್ತದೆ. ಈ ಹೊಳೆ ಪಶ್ಚಿಮಘಟ್ಟ ಸಾಲಿನಲ್ಲಿ ಹರಿಯುವದರಿಂದ ವರ್ಷಧಾರೆಯಾಗಿ ಹರಿಯುತ್ತದೆ. ಕಾಜೂರು ಹೊಳೆ ಪಾತ್ರದಲ್ಲಿಯ ಶೇ. 90 ರಷ್ಟು ರೈತರು ಬೇಸಿಗೆಯಲ್ಲಿ ಹೆಚ್ಚಾಗಿ ವ್ಯವಸಾಯ ಮಾಡುತ್ತಾರೆ, ಇಲ್ಲಿ ಭತ್ತ, ರಾಗಿ, ಜೋಳ, ಹಸಿರು ಮೆಣಸು, ತರಕಾರಿ, ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ, ಕೆಲ ಕೃಷಿಕರು ಹೊಳೆಗೆ ಮೋಟಾರು ಅಳವಡಿಸಿ ಕಾಫಿ ಮತ್ತು ಬಾಳೆ ತೋಟಗಳಿಗೆ ನೀರನ್ನು ಹಾಯಿಸುತ್ತಾರೆ, ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯಲು ಈ ಹೊಳೆ ನೀರೇ ಆಶ್ರಯ.

ಕಾಜೂರು ಹೊಳೆಯಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ ತಿಂಗಳ ನಂತರ ನೀರು ಸ್ವಲ್ಪ ಕಡಿಮೆಯಾದರೂ ರೈತರ ವ್ಯವಸಾಯಕ್ಕಂತೂ ತೊಂದರೆ ಯಾಗುತ್ತಿರಲಿಲ್ಲ. ಆದರೆ ಇದೀಗ ಫೆಬ್ರವರಿ ತಿಂಗಳಲ್ಲೆ ಬತ್ತಿ ಹೋಗಿದ್ದು, ಹೊಳೆ ದಡದಲ್ಲಿರುವ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.