ಪೊನ್ನಂಪೇಟೆ, ಮಾ. 9: ಬೇಗೂರು ಗ್ರಾಮದ ಶ್ರೀ ಪಾಳೆಮಾಡು ಈಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಹಾಗೂ ರೈತರ ಸಭೆಯಲ್ಲಿ ಕೊಂಗಣ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು. ಕಾಕಮಾಡ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹೋರಾಟ ಸಮಿತಿಯನ್ನು ರಚಿಸ ಲಾಯಿತು. ಯೋಜನೆಯಿಂದ ವೀರಾಜಪೇಟೆ ತಾಲೂಕಿನ ಅನೇಕ ಗ್ರಾಮಗಳು, ಕೃಷಿಭೂಮಿ ಮತ್ತು ಅರಣ್ಯಪ್ರದೇಶಗಳು ಮುಳುಗಡೆ ಯಾಗಲಿದ್ದು, ಇಲ್ಲಿಯ ಸಾವಿರಾರು ಜನರು ಹಾಗೂ ಜಾನುವಾರುಗಳು ವಸತಿ ಹೀನರಾಗುವ ಭೀತಿ ಎದುರಾಗುವ ಅಪಾಯವಿದೆ ಎಂದು ಸಭೆಯಲ್ಲಿ ಆತಂಕ ಎದುರಾಯಿತು.

ಜಿಲ್ಲಾಧಿಕಾರಿಗಳು ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಯೋಜನೆ ಬಗ್ಗೆ ಯಾವದೇ ಮಾಹಿತಿ ಇಲ್ಲವೆಂದು ಹೇಳಿರುವದು ಸಂಶಯಕ್ಕೆಡೆಮಾಡಿದೆ. ಆದುದರಿಂದ ಇಲ್ಲಿಯ ಕೃಷಿಕರು ಹಾಗೂ ಸಾರ್ವಜನಿಕರು ಭಯಭೀತ ರಾಗಿದ್ದು, ಮುಂದಿನ ದಿನಗಳಲ್ಲಿ ಕೊಂಗಣ ಯೋಜನೆಯ ವಿರುದ್ಧ ಎಲ್ಲಾ ಜನತೆಯ ಸಹಕಾರದೊಂದಿಗೆ ಹೋರಾಟ ಮಾಡುವ ಸಲುವಾಗಿ ಹೋರಾಟ ಸಮಿತಿಯನ್ನು ರಚಿಸಿದ್ದು, ಕೊಡಗಿಗೆ ಯಾವದೇ ಮಾರಕವಾದ ಯೋಜನೆಯ ವಿರುದ್ಧ ಹೋರಾಡಲು ಒಕ್ಕೊರಲಿನಿಂದ ತೀರ್ಮಾನಿಸ ಲಾಯಿತು. ಸಂದರ್ಭಕ್ಕೆ ತಕ್ಕಂತೆ ಯಾವದೇ ರೀತಿಯ ಹೋರಾಟಕ್ಕೆ ಸಿದ್ಧ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಕಾಕಮಾಡ ಚಂಗಪ್ಪ ಹೇಳಿದರು.