ವೀರಾಜಪೇಟೆ, ಮಾ. 9: ವೀರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುವ ಅಂತರ್ರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿ ಚೆಕ್ ಪೋಸ್ಟ್‍ನಲ್ಲಿರುವ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಕೇಂದ್ರದ ಮೇಲೆ, ಮೈಸೂರು ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಧಾಳಿ ನಡೆದಿದೆ. ತೆರಿಗೆ ಕೇಂದ್ರದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ ನಿವಾಸಿ ದೇವಾರಾಜು ಬಳಿ ಪತ್ತೆಯಾದ ರೂ. 30,900 ನಗದನ್ನು ವಶಕ್ಕೆ ಪಡೆದು ಈತ ಸೇರಿದಂತೆ ವಾಣಿಜ್ಯ ತೆರಿಗೆ ಅಧಿಕಾರಿ ನಿರಂಜನ್, ತೆರಿಗೆ ನಿರೀಕ್ಷಕ ನಾಗರಾಜು ಹಾಗೂ ಸಿಬ್ಬಂದಿಗಳಾದ ಗಿರೀಶ್ ಹಾಗೂ ಪುಟ್ಟೆಗೌಡ ಸೇರಿ ಐವರವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.\ಕೇರಳ ರಾಜ್ಯಕ್ಕೆ ತೆರಳುವ ಅಂತರಾಜ್ಯ ಹೆದ್ದಾರಿಯಲ್ಲಿನ ಪೆರುಂಬಾಡಿಯಲ್ಲಿ ಸರಕಾರದ ವಾಣಿಜ್ಯ ಇಲಾಖೆಯ ಮಾರಾಟ ತೆರಿಗೆ ಸಂಗ್ರಹ

(ಮೊದಲ ಪುಟದಿಂದ) ಕೇಂದ್ರವಿದ್ದು, ಇದು ರಾಜ್ಯ ಪ್ರವೇಶಿಸುವ ಸರಕುಗಳಿಗೆ ತೆರಿಗೆ ಪಾವತಿಯಾಗಿದೆಯೇ ಎಂದು ಪರಶೀಲನೆ ನಡೆಸಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಈ ಕೇಂದ್ರದ ಮೂಲಕ ನಿತ್ಯ ಅಧಿಕ ಸಂಖ್ಯೆಯಲ್ಲಿ ಸರಕು ಸಾಗಣೆ ವಾಹನ ಸಂಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವ್ಯಾಪಕವಾಗಿ ಹಣದ ಲೂಟಿ ನಡೆಯುತ್ತಿರುವ ಬಗ್ಗೆ ದೂರು ಬಂದ ಬಳಿಕ ಆ ದೂರು ಖಚಿತ ಪಡಿಸಿಕೊಂಡ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.

ಮಾ 4 ರಂದು ದೂರು ದಾಖಲಿಸಿಕೊಂಡ ಎಸಿಬಿ ತೆರಿಗೆ ಕೇಂದ್ರದಲ್ಲಿ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ದೇವರಾಜುವಿನ ವಿಳಾಸಕ್ಕಾಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಹುಡುಕಾಟ ನಡೆಸಿ ವಿಪಲಗೊಂಡು ಪೆರುಂಬಾಡಿಗೆ ತೆರಳಿದ್ದಾರೆ. ಪೆರುಂಬಾಡಿಯಲ್ಲಿ ಅದೇ ತಾನೆ ಬಸ್ ಏರಲು ಹೊರಟಿದ್ದ ಏಜೆಂಟ್ ದೇವರಾಜು ಹಾಗೂ ಆತನ ಬಳಿಯಿದ್ದ ರೂ. 30,900 ನಗದನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದರು.

ತಾ. 8 ರಂದು ತೆರಿಗೆ ಕೇಂದ್ರದಲ್ಲಿ ಅಧಿಕೃತವಾಗಿ ಸಂಗ್ರಹವಾದ ರೂ. 66,500 ಎಂದು ಖಚಿತ ಪಡಿಸಿಕೊಳ್ಳಲಾಗಿದೆ. ಜೊತೆಗೆ 7 ಸಾವಿರ ಬಂಧಿತ ಸಿಬ್ಬಂದಿಯ ವೈಯಕ್ತಿಕ ಹಣವಾಗಿದೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಸಮೀಪದಲ್ಲಿರುವ ಅಬಕಾರಿ ಇಲಾಖೆಯ ತನಿಖಾ ಕೇಂದ್ರದ ಮೇಲೆ ಕೂಡ ದೂರುಗಳಿದ್ದು, ಅಲ್ಲಿ ಧಾಳಿ ನಡೆಸಲಾಗಿದ್ದು, ಅಲ್ಲಿ ಅನಧಿಕೃತ ಹಣ ಪತ್ತೆಯಾಗಿಲ್ಲ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾಳಿಯಲ್ಲಿ ಹಾಸನ ಎಸಿಬಿಯ ಡಿವೈಎಸ್ಪಿ ರಾಜು, ವೃತ್ತ ನಿರೀಕ್ಷಕ ಗಂಗಾಧರ್ ಮತ್ತು ಮಂಜುನಾಥ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ನಿತ್ಯ 2000ಕ್ಕೂ ಅಧಿಕ ಸರಕು ವಾಹನಗಳು

ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿ ಚೆಕ್ ಪೋಸ್ಟ್ ಮಾರ್ಗವಾಗಿ ಕೊಡಗಿನಿಂದ ಕೇರಳಕ್ಕೆ ತೆರಳುವ ಹಾಗೂ ಕೇರಳದಿಂದ ಕೊಡಗಿನ ಕಡೆಗೆ ಬರುವ ವಾಹನಗಳ ಸಂಖ್ಯೆ ಅಂದಾಜಿನ ಪ್ರಕಾರ 2000 ವಾಹನಗಳಿಗೂ ಅಧಿಕವಾಗಿದೆ.

ಎರಡು ಕಡೆಯ ಸರಕು ವಾಹನಗಳಿಂದ ಮಾರಾಟ ತೆರಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಒಂದು ವಾಹನಕ್ಕೆ ಇಂತಿಷ್ಟು ಎಂದು ನಿಗಧಿಪಡಿಸಿದ್ದು ಈ ಪ್ರಕಾರ ಚೆಕ್‍ಪೋಸ್ಟ್‍ನಲ್ಲಿ ಪ್ರತಿದಿನ ರೂ 40,000ದಿಂದ 60,000ದವರೆಗೆ ಅನಧಿಕೃತವಾಗಿ ಸಂಗ್ರಹಿಸುತ್ತಿದ್ದಾರೆ. ಕೇರಳದಿಂದ ಕೊಡಗಿನ ಕಡೆಗೆ ಬರುವ ಕೆಂಪು ಕೆತ್ತುಕಲ್ಲು ತುಂಬಿರುವ ಪ್ರತಿ ಸರಕು ಲಾರಿಗೆ ಚಾಲಕರ ಪ್ರಕಾರ ರೂ 1200 ರಿಂದ ರೂ. 1500ರವರಗೆ ಸಂಗ್ರಹಿಸುತ್ತಿದ್ದಾರೆ. ಕೊಡಗಿನಿಂದ ಕೇರಳಕ್ಕೆ ತೆರಳುವ ಹುಲ್ಲು ಲಾರಿಗೂ ಇದೇ ದರ ನಿಗಧಿಪಡಿಸಲಾಗಿದೆ.

ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಅವರು ಕೇರಳಕ್ಕೆ ಹುಲ್ಲು ಸಾಗಾಟದ ನಿರ್ಬಂಧಕ್ಕೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಪೆರುಂಬಾಡಿಯ ಮಾರಾಟ ತೆರಿಗೆ ಅಧಿಕಾರಿಗಳು ಸಾಗಾಟದ ವಾಹನಕ್ಕೆ ಕಠಿಣ ಕ್ರಮ ಅನುಸರಿಸಿ ಹುಲ್ಲು ತುಂಬಿದ ಲಾರಿಗೆ ತಲಾ ರೂ300ರಿಂದ 400ರವರೆಗೆ ಅನಧಿಕೃತ ಹಣ ನಿಗಧಿಪಡಿಸಿ ವಸೂಲು ಮಾಡುತ್ತಿದ್ದರು. ಈ ಅನಧಿಕೃತ ತೆರಿಗೆಗಳು ರೈತರ ಹುಲ್ಲು ಮಾರಾಟದ ಮೇಲೆ ಅವಲಂಭಿತವಾಗುತ್ತಿದೆ ಎಂದು ದೂರಲಾಗಿತ್ತು.

ಈಚೆಗೆ ಅನಿಲ್ ಅಯ್ಯಪ್ಪ ಅವರು ಚೆಕ್‍ಪೋಸ್ಟ್‍ನಲ್ಲಿ ಮಾರಾಟ ತೆರಿಗೆ ಅಧಿಕಾರಿಗಳಿಂದ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಅಪರಾಧ ತನಿಖಾ ದಳ ಧಾ ಳಿ ಮಾಡುವಂತೆ ಆಧಾರ ಸಮೇತ ದೂರು ನೀಡಿದ್ದರು. ಈ ದೂರನ್ನು ಮಾ. 4 ರಂದು ಪರಿಶೀಲಿಸಿದ ಮಡಿಕೇರಿ ವಿಭಾಗದ ಎಸಿಬಿ ವೃತ್ತ ಅಧಿಕಾರಿ ಗಂಗಾಧರ್ ಅವರು ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ಎ.ಸಿ.ಬಿಯ ಮೈಸೂರು ವಿಭಾಗದ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್‍ಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಸಿಬಿ ತಂಡ ಇಂದು ಬೆಳಿಗ್ಗೆ ಧಾಳಿ ನಡೆಸಿದೆ.

ಪ್ರಕರಣ ಸಂಬಂಧಿಸಿದಂತೆ 5 ಮಂದಿಯನ್ನು ಎಸಿಬಿ ಪೊಲೀಸರ ತಂಡ ಮಡಿಕೇರಿ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಮೈಸೂರು ವಿಭಾಗದ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಹಾಸನ ವಿಭಾಗದ ಡಿವೈಎಸ್‍ಪಿ ರಾಜು, ಮಡಿಕೇರಿಯ ಸರ್ಕಲ್ ಇನ್ಸ್‍ಪೆಕ್ಟರ್ ಗಂಗಾಧರ್ ಹಾಗೂ ಸಿಬ್ಬಂದಿಗಳು ರಾತ್ರಿ ಎಂಟೂವರೆವರೆಗೂ ತನಿಖೆ ಮುಂದುವರೆಸಿದ್ದರು.

-ಡಿ.ಎಂ. ರಾಜ್‍ಕುಮಾರ್