ಮಡಿಕೇರಿ, ಮಾ. 9: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ‘ಏಕಗವಾಕ್ಷಿ ಸ್ಪಂದನಾ ಜನಸೇವಾ’ ಕೇಂದ್ರವನ್ನು ಉದ್ಘಾಟಿಸಿದರು.
ನಗರದ ಜಿಲ್ಲಾಡಳಿತ ಭವನದ ನೆಲಮಹಡಿಯಲ್ಲಿ ನೂತನವಾಗಿ ತೆರೆದಿರುವ ಸ್ಪಂದನಾ ಜನಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಆರ್.ಟಿ.ಸಿ. ವಿತರಿಸುವ ಮೂಲಕ ಚಾಲನೆ ನೀಡಿದರು. ಈಗಾಗಲೇ ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಲವು ಸೇವಾ ಸೌಲಭ್ಯಗಳು ದೊರೆಯುತ್ತಿವೆ. ಅದೇ ರೀತಿ ಸ್ಪಂದನಾ ಜನಸೇವಾ ಕೇಂದ್ರದಲ್ಲಿಯೂ ಸೌಲಭ್ಯಗಳು ದೊರೆಯಲಿದ್ದು, ಅವುಗಳನ್ನು ಬಳಸಿಕೊಳ್ಳುವಂತೆ ಸಚಿವರು ತಿಳಿಸಿದರು.
ಸ್ಪಂದನಾ ಜನಸೇವಾ ಕೇಂದ್ರದಲ್ಲಿ ಅಟಲ್‍ಜೀ ನಾಡಕಚೇರಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಎಲ್ಲಾ ಸೇವೆಗಳು, ಭೂಮಿ ಯೋಜನೆಯಡಿ ನೀಡಲಾಗುತ್ತಿರುವ ಸೇವೆಗಳು, ಸರ್ವೆ ಇಲಾಖೆಗೆ ಸಂಬಂಧಿಸಿದ ಅರ್ಜಿ, ದೃಢೀಕರಣ, ಆಹಾರ ಇಲಾಖೆಯ ಸೇವೆಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ, ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಪರಿಷ್ಕರಣೆಗೆ ಅರ್ಜಿ ಸ್ವೀಕರಿಸುವದು, ಹೀಗೆ ವಿವಿಧ ಸೌಲಭ್ಯಗಳು ಈ ಕೇಂದ್ರದಲ್ಲಿ ದೊರೆಯಲಿದೆ ಎಂದು ಸಚಿವರು ತಿಳಿಸಿದರು.