ಆಲೂರು-ಸಿದ್ದಾಪುರ, ಮಾ. 9: ಜಿಲ್ಲಾ ಯುವಜನ ಸೇವಾ ಸಬಲೀಕರಣ ಇಲಾಖೆ, ನೆಹರೂ ಯುವ ಕೇಂದ್ರ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಮತ್ತು ಮಾಲಂಬಿ ಶ್ರೀ ವಿನಾಯಕ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಡಿಜಿಟಲ್ ಇಂಡಿಯಾ ಮಾಹಿತಿ ಕಾರ್ಯಾಗಾರವನ್ನು ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಡಿಜಿಟಲ್ ವ್ಯವಹಾರದ ಕುರಿತು ಆಲೂರು-ಸಿದ್ದಾಪುರ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹರ್ಷಕುಮಾರ್ ಮಾತನಾಡಿ, ಪ್ರಧಾನಮಂತ್ರಿ ರೂ. 500 ಮತ್ತು ರೂ. 1 ಸಾವಿರ ಮುಖಬೆಲೆಯ ನೋಟನ್ನು ಅಪಮೌಲ್ಯಗೊಳಿಸಿ ದೇಶದಲ್ಲಿ ನಗದು ರಹಿತ ವ್ಯವಹಾರ ನಡೆಸುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನತೆ, ರೈತರು, ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರು ಇದಕ್ಕೆ ಸಹಕಾರ ನೀಡಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಬ್ಯಾಂಕ್‍ನಲ್ಲಿ ಖಾತೆದಾರರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ರವಿ ಯಡೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಗ್ರಾಮದ ಹಿರಿಯ ನಾಗರಿಕ ಕೆ.ಎಂ. ಮಾಚಯ್ಯ, ಆಲೂರು-ಸಿದ್ದಾಪುರ ಗ್ರಾ.ಪಂ. ಸದಸ್ಯ ಎಸ್.ಜೆ. ಪ್ರಸನ್ನ, ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಜಯಕುಮಾರ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ದೇವೇಂದ್ರ, ಶಿಕ್ಷಕ ವಿಶ್ವನಾಥ್, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಜಾನಕಿ ಗಂಗಾಧರ್ ಇದ್ದರು. ಕಾರ್ಯಾಗಾರದಲ್ಲಿ ವಿವಿಧ ಸ್ತ್ರೀಶಕ್ತಿ ಮತ್ತು ಸ್ವಸಾಹಾಯ ಸಂಘಗಳ ಸದಸ್ಯರು, ಯುವಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.