ಕೂಡಿಗೆ, ಮಾ. 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಿ ಹತ್ತು ವರ್ಷಗಳು ಕಳೆದಿದ್ದು, ಇದರ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಕೂಡಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕಸ ವಿಲೇವಾರಿ ಘಟಕದ ವಿಷಯವಾಗಿ ಮಾಸಿಕ ಸಭೆಯಲ್ಲಿ ಅನೇಕ ಬಾರಿ ಚರ್ಚೆ ನಡೆದು, ಕುಶಾಲನಗರ ಪಟ್ಟಣ ಪಂಚಾಯಿತಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ವ್ಯವಸ್ಥೆಗಳನ್ನು ಸರಿಪಡಿಸದಿದ್ದ ಬಗ್ಗೆ ಕಸ ವಿಲೇವಾರಿ ಘಟಕದ ಸಮೀಪದಲ್ಲಿ ರುವ ಗ್ರಾಮಗಳಾದ ಭುವನಗಿರಿ ಸೀಗೆಹೊಸೂರು ಅಕ್ಕಪಕ್ಕದ ಜಮೀನು ಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ರೈತರು, ಗ್ರಾಮಸ್ಥರು ಗ್ರಾ.ಪಂ.ಗೆ ದೂರು ನೀಡಿದ್ದರು.

ಈ ಸ್ಥಳ ಕಾಡುಮಯವಾಗಿದ್ದರೂ ಕುಶಾಲನಗರ ಪ.ಪಂ.ಯು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಸ್ಥಳೀಯರಿಗೆ ತೊಂದರೆಯುಂಟಾಗಿದೆ. ತಕ್ಷಣದಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಗ್ರಾ.ಪಂ. ಮಾಸಿಕ ಸಭೆಯಲ್ಲಿ ಕುಶಾಲನಗರದ ಪ.ಪಂ.ಯ ಕಸವನ್ನು ಈ ಘಟಕಕ್ಕೆ ಹಾಕದಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವದಾಗಿ ಕೂಡಿಗೆ ಗ್ರಾ.ಪಂ. ಸದಸ್ಯರಾದ ರವಿ ತಿಳಿಸಿದರು.

ಪ್ರತಿಭಟನೆಯ ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಅವರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಈ ಸಂದರ್ಭ ಕೂಡಿಗೆ ಗ್ರಾ.ಪಂ. ಸದಸ್ಯರುಗಳಾದ ಕೆ.ಟಿ. ಈರಯ್ಯ, ರವಿ, ರಾಮಚಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

-ಕೆ.ಕೆ.ನಾಗರಾಜಶೆಟ್ಟಿ