ಸೋಮವಾರಪೇಟೆ, ಮಾ. 9: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಅವರನ್ನು ದಿಢೀರ್ ಪದಚ್ಯುತಗೊಳಿಸಿ ನೂತನ ಅಧ್ಯಕ್ಷರನ್ನು ನೇಮಿಸಿರುವ ನಂತರ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಶೀಘ್ರದಲ್ಲೇ ಜಿಲ್ಲೆಗೆ ರಾಜ್ಯ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಲಿದ್ದು, ಜಿಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.ಅಧ್ಯಕ್ಷರ ದಿಢೀರ್ ಬದಲಾವಣೆ ಯನ್ನು ಪುನರ್ ಪರಿಶೀಲಿಸುವಂತೆ, ಪಕ್ಷದಲ್ಲಿನ ಬದಲಾವಣೆಗಳನ್ನು ಸ್ಥಳೀಯ ನಾಯಕರುಗಳು ಹಾಗೂ ಕಾರ್ಯಕರ್ತರ ಗಮನಕ್ಕೆ ಮುಂಚಿತವಾಗಿ ತರುವಂತೆ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರ ನಿಯೋಗ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭ ರಾಜ್ಯಾಧ್ಯಕ್ಷರು ಈ ಬಗ್ಗೆ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಅಧ್ಯಕ್ಷರನ್ನು ಬದಲಾಯಿಸುವಂತೆ ಹಲವು ಮುಖಂಡರು

(ಮೊದಲ ಪುಟದಿಂದ) ಒತ್ತಡ ತಂದ ಹಿನ್ನೆಲೆ ಅನಿವಾರ್ಯವಾಗಿ ಬದಲಾವಣೆ ಮಾಡಲಾಗಿದೆ. ಈ ಘೋಷಣೆಯಲ್ಲಿ ಯಾವದೇ ಬದಲಾವಣೆ ಮಾಡುವದಿಲ್ಲ. ಮನು ಮುತ್ತಪ್ಪ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಸ್ಥಾನ ನೀಡಲಾಗುವದು. ಕೇವಲ ಅಧ್ಯಕ್ಷರ ಬದಲಾವಣೆ ಮಾತ್ರ ಮಾಡಲಾಗಿದ್ದು, ಉಳಿದಂತೆ ಇತರ ಮೋರ್ಚಾ, ಘಟಕಗಳ ಪದಾಧಿಕಾರಿಗಳಲ್ಲಿ ಯಾವದೇ ಬದಲಾವಣೆಯಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳಿಗೇ ಪಕ್ಷದ ಟಿಕೇಟ್ ದೊರೆಯಲಿದೆ. ನೀವೆಲ್ಲರೂ ಸೇರಿ ಈರ್ವರನ್ನು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿಕೊಡಬೇಕು. ಪಕ್ಷದ ಟಿಕೇಟ್ ವಿಚಾರದಲ್ಲಿ ಯಾವದೇ ಗೊಂದಲ ಬೇಡ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಕೊಡಗಿನಿಂದ ಈರ್ವರು ಬಿಜೆಪಿ ಶಾಸಕರನ್ನು ಗೆಲ್ಲಿಸುವಂತೆ ಸೂಚಿಸಿದ್ದಾರೆನ್ನಲಾಗಿದೆ.

ಕೊಡಗಿನಿಂದ ಬೆಂಗಳೂರಿಗೆ ತೆರಳಿದ್ದ ನಿಯೋಗದ ಪ್ರಮುಖರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪಕ್ಷದ ಜಿಲ್ಲಾಧ್ಯಕ್ಷರ ದಿಡೀರ್ ಬದಲಾವಣೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮನು ಮುತ್ತಪ್ಪ ಅವರು ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಇವರ ಅವಧಿಯಲ್ಲಿ ನಡೆದ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಪಕ್ಷದ ಎಲ್ಲಾ ಸಭೆಗಳು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪಕ್ಷದ ವೇದಿಕೆಯಲ್ಲಿ ಹಲವಷ್ಟು ಪ್ರತಿಭಟನೆಗಳನ್ನೂ ಮಾಡಲಾಗಿದೆ. ಹಾಗಿದ್ದರೂ ದಿಢೀರ್ ಬದಲಾವಣೆ ಸಮಂಜಸವಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

ಎಲ್ಲವನ್ನೂ ಆಲಿಸಿದ ಯಡಿಯೂರಪ್ಪ ಅವರು, ಕೊಡಗು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯ ಸಂಪೂರ್ಣ ಅರಿವು ತಮಗಿದೆ. ರಾಜ್ಯಮಟ್ಟದಲ್ಲಿ ಈಶ್ವರಪ್ಪ ಹಾಗೂ ಕೇಂದ್ರದ ಕೆಲ ನಾಯಕರ ಅಪೇಕ್ಷೆಯಂತೆ ಕೆಲವೊಂದು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾಯಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಇತರ ಮುಖಂಡರಿಗೂ ತಿಳಿಸಲಾಗಿದೆ. ಈ ನಿಯೋಜನೆಯಲ್ಲಿ ಮತ್ತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನಿಯೋಗದ ಬೇಡಿಕೆಯನ್ನು ನಯವಾಗಿ ತಳ್ಳಿ ಹಾಕಿದ್ದಾರೆ.

ಮನು ಮುತ್ತಪ್ಪ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಪ್ರಮುಖ ಸ್ಥಾನ ನೀಡುತ್ತೇನೆ. ಸದ್ಯದಲ್ಲಿಯೇ ಈ ಬಗ್ಗೆ ಘೋಷಣೆ ಮಾಡಲಿದ್ದೇನೆ. ಜಿಲ್ಲೆಯಲ್ಲಿರುವ ನಾಯಕರ ಗೊಂದಲಗಳನ್ನು ಪರಿಹರಿಸಿ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಶೀಘ್ರದಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರನ್ನು ಕೊಡಗಿಗೆ ಕಳುಹಿಸಿ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೂರ್ಣಿಮಾ ಗೋಪಾಲ್ ಹಾಗೂ ಸರೋಜಮ್ಮ ಹೊರತುಪಡಿಸಿ ಬಿಜೆಪಿಯ ಎಲ್ಲಾ ಜಿ.ಪಂ. ಸದಸ್ಯರು, ಮಡಿಕೇರಿ ತಾ.ಪಂ. ಅಧ್ಯಕ್ಷರು, ಸದಸ್ಯರುಗಳು, ಪಕ್ಷದ ಮುಖಂಡರುಗಳಾದ ವಿ.ಕೆ. ಲೋಕೇಶ್, ಬಾಲಚಂದ್ರ ಕಳಗಿ, ಎಂ.ಎನ್. ಕೊಮಾರಪ್ಪ, ತಳೂರು ಕಿಶೋರ್‍ಕುಮಾರ್, ರವಿ ಬಸಪ್ಪ, ಕಾಳನ ರವಿ, ಡೀನ್ ಬೋಪಣ್ಣ, ಪ್ರಸನ್ನ, ದೀಪಕ್, ಮಂಜುಳಾ ಸೇರಿದಂತೆ 33 ಮಂದಿ ಪಕ್ಷದ ಮುಂಚೂಣಿ ಘಟಕದ ನಾಯಕರು ತೆರಳಿದ್ದರು.

-ವಿಜಯ್