ಸೋಮವಾರಪೇಟೆ, ಮಾ. 9: ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕರಾದ ಹಿರಿಕರ ಗ್ರಾಮದ ಪ್ರಮೀಳಾ ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೃಷಿ ಭೂಮಿ ಎಂದಿಗೂ ರೈತರಿಗೆ ಮೋಸ ಮಾಡುವದಿಲ್ಲ. ಸಾವಯವ ಕೃಷಿಯಲ್ಲಿ ನಷ್ಟದ ಮಾತೇ ಇಲ್ಲ. ಕೃಷಿಯನ್ನು ಇಷ್ಟಪಟ್ಟು ಮಾಡಬೇಕು. ಸುಧಾರಿತ ಬಿತ್ತನೆ ಬೀಜ ಆಯ್ಕೆ, ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡುವದು, ನಿಗದಿತ ಸಮಯದಲ್ಲಿ ಬೆಳೆಗೆ ಪೋಷಕಾಂಶಗಳ ಪೂರೈಕೆಯೊಂದಿಗೆ ರೋಗ ಹತೋಟಿ ಮಾಡಿಕೊಂಡರೆ ಕೃಷಿಯೂ ಲಾಭದಾಯಕ ಎಂದು ಹೇಳಿದರು.

ಈ ಸಂದರ್ಭ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಡಾ. ಅರ್ಪಿತಾ ಪ್ರತಾಪ್ ಸಿಂಹ, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಶಾಲಾ ಮುಖ್ಯಸ್ಥೆ ಕವಿತಾ ವಿರೂಪಾಕ್ಷ, ಖಚಾಂಚಿ ಲಾವಣ್ಯ ಮೋಹನ್, ಮಾಜಿ ಕಾರ್ಯದರ್ಶಿ ಪುಷ್ಪ ಸುರೇಶ್ ಉಪಸ್ಥಿತರಿದ್ದರು.