ಶ್ರೀಮಂಗಲ, ಮಾ. 9: ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲ ಒದಗಿಸುವ ಈ ಸಂಪರ್ಕ ರಸ್ತೆಯ ನಡುವೆ ಸೇತುವೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಯ ಕೆಲಸವನ್ನು 2 ವರ್ಷದಿಂದ ಸ್ಥಗಿತಗೊಳಿಸಿದ್ದು, ಕಳೆದ ನವೆಂಬರ್ನಲ್ಲಿ ಬಿರುನಾಣಿ ಜನತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದೀಗ ಕೆಲವೆಡೆ ಮಾತ್ರ ರಸ್ತೆ ಕಾಮಗಾರಿ ಮಾಡಲಾಗಿದ್ದು, ಸೇತುವೆ ಕಾಮಗಾರಿಯನ್ನು ಆರಂಭಿಸಿಲ್ಲ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ತಾ. 13 ರಂದು ಬಿರುನಾಣಿ-ಟಿ.ಶೆಟ್ಟಿಗೇರಿ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಜನತೆ ಮುಂದಾಗಿದ್ದಾರೆ.
ಈ ರಸ್ತೆ ನಡುವೆ ಕಕ್ಕಟ್ಟು ನದಿಗೆ ಸೇತುವೆ ನಿರ್ಮಿಸಬೇಕಾಗಿದ್ದು, 3 ಅಡಿ ಎತ್ತರದ ಪಿಲ್ಲರ್ಗಳನ್ನು ಮಾತ್ರ ನಿರ್ಮಿಸಲಾಗಿದೆ. ರಸ್ತೆಗೆ ಹಲವೆಡೆ ಜೆಲ್ಲಿಕಲ್ಲು ಹಾಕಲಾಗಿದ್ದು, ಇದರ ಮೇಲೆ ವಾಹನ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಮೂರು ವರ್ಷದ ಹಿಂದೆ ಈ ಯೋಜನೆಗೆ ಇಲ್ಲಿನ ರೈತರು ಕಾಫಿ ತೋಟ ಹಾಗೂ ಕರಿಮೆಣಸು ಬಳ್ಳಿಗಳನ್ನು ಕಡಿದು ಜಾಗ ನೀಡಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕೂಡಲೇ ಸೇತುವೆ ಹಾಗೂ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ ತಾ. 13 ರಂದು ರಸ್ತೆ ತಡೆ ಹಮ್ಮಿಕೊಳ್ಳುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಮಾಜಿ ಕಾರ್ಯದರ್ಶಿ ಮಲ್ಲೆಂಗಡ ಪೆಮ್ಮಯ್ಯ, ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಮೃತ್ಯುಂಜಯ ದೇವಸ್ಥಾನ ಅಧ್ಯಕ್ಷ ಚೋನೀರ ಸುಬ್ರಮಣಿ, ಗ್ರಾ.ಪಂ. ಸದಸ್ಯರಾದ ಕಾಯಂಪಂಡ ಸುನಿಲ್, ಅಣ್ಣೀರ ಮಲ್ಲಿಗೆ ಪೂಣಚ್ಚ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬೊಟ್ಟಂಗಡ ಜಪ್ಪು, ಪ್ರಮುಖರಾದ ಬಲ್ಯಮೀದೇರಿರ ಸುರೇಶ್, ಕಾಯಪಂಡ ಮೋಟಯ್ಯ, ಅಣ್ಣೀರ ಪ್ರವೀಣ್, ಅಣ್ಣೀರ ಪೆಮ್ಮಯ್ಯ, ಅಣ್ಣೀರ ಲೋಕೇಶ್, ಚೋನೀರ ಮಧು, ಅರಂಗೀರ ಪ್ರವೀಣ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.