ಕೂಡಿಗೆ, ಮಾ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಬೇಕಾ ಬಿಟ್ಟಿಯಾಗಿ ಟ್ರ್ಯಾಕ್ಟರ್ಗಳಲ್ಲಿ ಕಸ ತಂದು ಸುರಿಯುವ ಬಗ್ಗೆ ಕುಶಾಲನಗರ ಪಟ್ಟಣ ಪಂಚಾಯಿತಿಯ ಗಮನಕ್ಕೆ ತರುತ್ತಲೇ ಬಂದರೂ ಯಾವದೇ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ ಎಂದು ಆರೋಪಿಸಿ ಭುವನಗಿರಿಯ ಗ್ರಾಮಸ್ಥರು ನಿನ್ನೆ ಆರಂಭಿಸಿರುವ ಪ್ರತಿಭಟನೆಯನ್ನು ಎರಡನೇ ದಿನವೂ ಮುಂದುವರೆಸಿದರು.
ಭುವನಗಿರಿಯ ರೈತರು ಹಾಗೂ ನಿವಾಸಿಗಳು ಇಂದು ಕುಶಾಲನಗರ ಪಟ್ಟಣ ಪಂಚಾಯ್ತಿಯ ಕಸ ವಿಲೇವಾರಿ ಘಟಕಕ್ಕೆ ಬೀಗ ಜಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕುಶಾಲನಗರದಿಂದ ಕಸವನ್ನು ಹೊತ್ತು ತರುತ್ತಿರುವ ಟ್ರ್ಯಾಕ್ಟರ್ಗಳ ತ್ಯಾಜ್ಯದ ವಾಸನೆಯನ್ನು ಬೆನ್ನತ್ತಿ ಅನೇಕ ನಾಯಿಗಳು ಘಟಕದ ಒಳಗೆ ಬರುತ್ತವೆ. ಅನೇಕ ಬಾರಿ ಸುತ್ತಮುತ್ತಲ ನಿವಾಸಿಗಳ ಮೇಲೆ ಈ ಬೀದಿ ನಾಯಿಗಳು ಧಾಳಿ ಮಾಡಿರುವ ಘಟನೆಗಳು ನಡೆದಿವೆ. ಸಾಕಿದ ಬೆಕ್ಕುಗಳನ್ನು ಅಮಾನುಷವಾಗಿ ಕೊಲ್ಲುತ್ತಿವೆ. ಆದರೆ, ಬೀದಿ ನಾಯಿಗಳನ್ನು ಕೊಲ್ಲುವದಕ್ಕೆ ಕಾನೂನಿನಲ್ಲಿ ನಿಷೇಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಶಾಲನಗರದ ವಸತಿ ನಿಲಯಗಳು, ಹೋಟೆಲ್ಗಳು ಮತ್ತು ಕಲ್ಯಾಣ ಮಂಟಪಗಳು ಹೊರಸೂಸುವ ವ್ಯರ್ಥ ಆಹಾರ ತ್ಯಾಜ್ಯಗಳನ್ನು ಇಲ್ಲಿಗೆ ಸುರಿಯಲಾಗುತ್ತಿದೆ. ಸತ್ತ ಪ್ರಾಣಿಗಳನ್ನು ಕಸದ ಜೊತೆಯಲ್ಲಿ ತಂದು ಹಾಕುತ್ತಿರುವದು ದಿನನಿತ್ಯದ ಕಾರ್ಯವೈಖರಿಯಾಗಿದೆ ಎಂದು ಟೀಕಿಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ನವಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮಸ್ಥರಿಗೆ ಈ ಘಟಕದಿಂದ ಅನಾರೋಗ್ಯ ಉಂಟಾಗಿದೆ. ಬಹಳ ವರ್ಷಗಳಿಂದಲೂ ಈ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಕಾರ್ಯ ವೈಖರಿಯನ್ನು ಗ್ರಾಮಸ್ಥರ ಹಿತಾಸಕ್ತಿಯಿಂದ ಖಂಡಿಸುತ್ತೇವೆ ಎಂದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಸ್ಥಳಕ್ಕೆ ಆಗಮಿಸಿ ಭುವನಗಿರಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಇದುವರೆಗೆ ಭರವಸೆಕೊಟ್ಟಂತೆಯೇ ನಡೆದುಕೊಳ್ಳದೆ ಇರಬಹುದು. ಆದರೆ, ತಾ. 21ರವರೆಗೆ ಕಾಲಾವಕಾಶ ಕೊಡಿ ಎಂದಾಗ ಗ್ರಾಮಸ್ಥರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮಧ್ಯೆ ಪ್ರವೇಶಿಸಿದ ಭುವನಗಿರಿ ಗ್ರಾಮದ ನಂಜುಂಡಸ್ವಾಮಿ, ಪಟ್ಟಣ ್ಮು ಪಂಚಾಯಿತಿ ಉಪಾಧ್ಯಕ್ಷ ಶರವಣಕುಮಾರ್, ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಅವರು ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಸುಧಾರಣೆ ತರುತ್ತೇವೆ ಎಂದು ಭರವಸೆ ನೀಡಿದರು.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಯಾವದೇ ಅಹಿತಕರ ಘಟನೆ ಸಂಭವಿಸದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದರು.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸ್ವಾಮಿ ನಾಯಕ್, ಕುಶಾಲನಗರ ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ಲಿಂಗರಾಜು, ಗ್ರಾಮಸ್ಥರಾದ ದೊಡ್ಡಯ್ಯ, ಜವರಪ್ಪ, ಸುರೇಶ್, ಗಂಗಯ್ಯ ಮತ್ತಿತರರು ಇದ್ದರು.