ಚೆಟ್ಟಳ್ಳಿ, ಮಾ. 10: ಓಹೋ.. ವಯ್ಯ ‘ಓಹೋ..,ಹೋ..ವಯ್ಯ ಹೋ...’ ಎಂಬ ದೇವರ ನಾಮ ದೊಂದಿಗೆ ಸಂಪ್ರದಾಯದ ಉಡುಪಾದ ಬಿಳಿಯ ಕುಪ್ಯಚ್ಯಾಲೆ ತೊಟ್ಟ ಊರಿನವರು ಶ್ರದ್ದಾಭಕ್ತಿ ಯೊಂದಿಗೆ ದೇವಾಲಯದ ನೆಲೆಯಿಂದ ಎರಡೆರಡು ಜಿಂಕೆ ಕೊಂಬನಿಡಿದು ಮೇದರಡೋಲಿನ ಕೊಟ್ಟಿಗೆ ತಕ್ಕಂತೆ ದೇವಾಲಯದ ಸುತ್ತಲು ಹಾಗೂ ದೀಪ ಸ್ಥಂಬದ ಸುತ್ತಲು ದೇವತಕ್ಕ ಹಾಗೂ ಊರು ತಕ್ಕರು ಕುಣಿದಂತೆ ಸಾಲಾಗಿ ಹೆಜ್ಜೆಯನ್ನಾಕುತ್ತಾ 18 ತರಹದ ವಿಶೇಷ ಕೊಂಬಾಟ್ (ಕೊಂಬಿನ ನೃತ್ಯ) ವನ್ನು ಮಾಡುವ ಮೂಲಕ ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಫೆ. 28ಕ್ಕೆ ದೇವಾಲಯದ ಹಬ್ಬ ಕಟ್ಟು ಬೀಳಲಾಗಿ ಮಾರ್ಚ್ 3ಕ್ಕೆ ಪಟ್ಟಣಿ ಹಬ್ಬ, 4ಕ್ಕೆ ಅಯ್ಯಪ್ಪ ದೇವರ ಬನ ಹಾಗೂ ಮಾ.5 ರಂದು ದೊಡ್ಡ ಹಬ್ಬವನ್ನು ನಡೆಸಲಾಯಿತು. ಅಂದು ದೇವರ ಹಬ್ಬಕ್ಕೆ ಬಂದಂತಹ ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಆ ಊರಿನ ಹೆಣ್ಣುಮಕ್ಕಳು, ಭಕ್ತರು ,ಹರಕೆ ಹೊತ್ತವರು ಭಂಡಾರವನ್ನು ಹಾಕಿ ದೇವರ ಆಶೀರ್ವಾದವನ್ನು ಪಡೆದು ಪ್ರಸಾದವನ್ನು ಸ್ವೀಕರಿಸುವರು.

ದೊಡ್ಡ ಹಬ್ಬದಂದು ಊರಿನವರು ದುಡಿಕೊಟ್ಟ್ ಹಾಡು ಒಡ್ಡೋಲಗ ದೊಂದಿಗೆ ದೇವಬಂಡಾರ ವನ್ನು ದೇವಾಲಯಕ್ಕೆ ತಂದು ಹಬ್ಬ ಮುಗಿದ ನಂತರ ಊರಿನವರು ದೇವಭಂಡಾರ ವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಗೆ ತೆರಳಿ ದೇವ ಭಂಡಾರ ನೆಲೆಯಲ್ಲಿ ಒಪ್ಪಿಸಲಾಯಿತು.