ಸೋಮವಾರಪೇಟೆ, ಮಾ. 10: ಪ್ರತಿಯೋರ್ವ ಮಹಿಳೆಯೂ ವಿದ್ಯಾವಂತರಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಸ್. ದೊಡ್ಡಮನಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ಶಾಂತಳ್ಳಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಗಂಡು-ಹೆಣ್ಣಿನ ನಡುವೆ ತೀರಾ ಕ್ಷುಲ್ಲಕ ವಿಚಾರಕ್ಕಾಗಿ ವೈಮನಸ್ಸು ಬೆಳೆಯುತ್ತಿದ್ದು, ದಾಂಪತ್ಯದಲ್ಲಿ ವಿರಸ ಉಂಟಾಗಿ ವಿಚ್ಛೇದನದವರೆಗೆ ತಲಪುತ್ತದೆ. ಮಕ್ಕಳು ವಯಸ್ಸಾದ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವದು ದುರದೃಷ್ಟಕರ. ಕುಟುಂಬದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಹೆಣ್ಣಿನಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ‘ಎಲ್ಲಿ ಸ್ತ್ರೀಯರು ಗೌರವಿಸಲ್ಪಡು ತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ’ ಎಂಬ ನಾಣ್ಣುಡಿ ಯಂತೆ ಸಮಾಜದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಗೌರವವನ್ನು ನೀಡಬೇಕಾ ದದ್ದು ಪ್ರತಿಯೊಬ್ಬರ ಕರ್ತವ್ಯ. ಬಾಲ್ಯದಲ್ಲಿ ತಂದೆ-ತಾಯಿಯರು, ಯೌವನದಲ್ಲಿ ಪತಿಯಿಂದ, ಮುಪ್ಪಿನಲ್ಲಿ ಮಕ್ಕಳಿಂದ ಸಂರಕ್ಷಿತಳಾಗಿ ದ್ದರೂ, ಸಮಾಜದಲ್ಲಿ ಹೆಣ್ಣನ್ನು ಹೆಣ್ಣೇ ದ್ವೇಷಿಸುವದು ವಿಪರ್ಯಾಸ ಎಂದರು. ಕಾರ್ಯಕ್ರಮವನ್ನು ಇಲ್ಲಿನ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಪವಿತ್ರ ಧರ್ಮಪ್ಪ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಎಸ್. ಯಶೋದ, ಮೇಲ್ವಿಚಾರಕಿ ವೈ.ಎಸ್. ಶೈಲಾ, ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.