‘ಶಕ್ತಿ’ ವರದಿಗೆ ಸ್ಪಂದನ

ವಿಶೇಷ ವರದಿ: ಎ.ಎನ್. ವಾಸು

ಸಿದ್ದಾಪುರ, ಮಾ. 10: ಎಚ್ಚೆತ್ತುಕೊಂಡ ಗ್ರಾ.ಪಂ. ಕೊನೆಗೂ ಮಾಂಸ ಹಾಗೂ ಮೀನು ಮಾರಾಟವನ್ನು ಹರಾಜು ನಡೆಸಲು ಮುಂದಾಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸಿದ್ದಾಪುರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ತಾರಕಕ್ಕೇರಿದ್ದು, ಕೋಳಿ ಸೇರಿದಂತೆ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾತ್ರವಲ್ಲದೆ ಮಾಂಸಗಳ ತ್ಯಾಜ್ಯ ವಿಲೇವಾರಿ ಗ್ರಾ.ಪಂ.ಗೆ ತಲೆನೋವಾಗಿ ಪರಿಣಮಿಸಿತ್ತು. ಈ ಬಗ್ಗೆ ‘ಶಕ್ತಿ’ ವಿಸ್ತøತ ವರದಿಯನ್ನು ಪ್ರಕಟಿಸಿದ್ದು, ಇದೀಗ ಎಚ್ಚೆತ್ತುಕೊಂಡ ಗ್ರಾ.ಪಂ. ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮಾಂಸ ಹಾಗೂ ಮೀನು ಮಾರಾಟದ ಹಕ್ಕನ್ನು ಹರಾಜು ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಹೈಟೆಕ್ ಮಾರುಕಟ್ಟೆಗೆ ಮಾಂಸ ಹಾಗೂ ಮೀನು ವ್ಯಾಪಾರವನ್ನು ಸ್ಥಳಾಂತರಿಸಲು ನಿರ್ಣಯ ಕೈಗೊಂಡಿದೆ. ಕಳೆದ ಸಾಲಿನಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾಂಸ ಹಾಗೂ ಮೀನು ಸಿಗುವ ಉದ್ಧೇಶದಿಂದ ಗ್ರಾ.ಪಂ. ಆಡಳಿತ ಮಂಡಳಿಯು ಲೈಸೆನ್ಸ್ ನೀಡಿತ್ತು. ಆದರೆ ಜಿಲ್ಲೆಯ ವಿವಿಧ ಭಾಗದಲ್ಲಿ ಕೋಳಿ, ಹಂದಿ ಹಾಗೂ ಕುರಿ ಮಾಂಸದ ಬೆಲೆ ಕಡಿಮೆಯಿದ್ದರೂ ಸಿದ್ದಾಪುರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಮಾತ್ರವಲ್ಲದೇ ಕೋಳಿ ಸೇರಿದಂತೆ ಇತರ ಮಾಂಸದ ತ್ಯಾಜ್ಯಗಳ ವಿಲೇವಾರಿಯನ್ನು ಸಾರ್ವಜನಿಕ ರಸ್ತೆಯಲ್ಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಈ ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕ ಅಭಿಪ್ರಾಯದಂತೆ ಮೀನು-ಮಾಂಸ ಮಾರಾಟದ ಹಕ್ಕನ್ನು ಟೆಂಡರ್ ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಮಾರುಕಟ್ಟೆಗೆ ಸ್ಥಳಾಂತರಿಸುವ ದಿಟ್ಟ ನಿರ್ಣಯವನ್ನು ಸಿದ್ದಾಪುರ ಗ್ರಾ.ಪಂ. ಆಡಳಿತ ಮಂಡಳಿ ಕೈಗೊಂಡಿದ್ದು, ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಇದಕ್ಕೆ ಸಾಥ್ ನೀಡಿದ್ದಾರೆ.

ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಪ್ರಕ್ರಿಯೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ಹೈಟೆಕ್ ಮಾರುಕಟ್ಟೆಯ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸದಸ್ಯರು ಸೂಚಿಸಿದರು. ಈಗಾಗಲೇ ನಿರ್ಮಾಣವಾಗಿರುವ ಒಟ್ಟು 6 ಮಳಿಗೆಗಳಲ್ಲಿ 4 ಕೋಳಿ ಹಾಗೂ 2 ಕುರಿ ಮಾಂಸ ಮಾರಾಟದ ಹಕ್ಕನ್ನು ನೀಡಲು ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಮುದ್ರ ಮೀನು ಮಾರಾಟದ 2 ಹಕ್ಕು ಹಾಗೂ 1 ಕೆರೆ ಮೀನು ಮಾರಾಟದ ಹಕ್ಕು, ಹಾಗೂ 1 ಹಂದಿ ಮಾಂಸ ಮಾರಾಟದ ಹಕ್ಕನ್ನು ಹರಾಜು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮಾಂಸ ವ್ಯಾಪಾರಿಗಳು ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ಗ್ರಾ.ಪಂ. ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ವ್ಯಾಪಾರಿಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ನೀಡಬಾರದು ಎಂದು ಗ್ರಾ.ಪಂ. ಸದಸ್ಯರು ಸಲಹೆ ನೀಡಿದರು.