ಶಿರಂಗಾಲ, ಮಾ. 10 : ಕೊಡಗಿನ ಗಡಿ ಗ್ರಾಮ ಶಿರಂಗಾಲ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವಿವಾರ್ಷಿಕ ಉತ್ಸವ ಸಂದರ್ಭದಲ್ಲಿ ಎಲ್ಲಾ ವರ್ಗಗಳು ಶಾಂತಿ ಕಾಪಾಡುವಂತೆ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣ ಸಲಹೆ ನೀಡಿದರು. ಇಲ್ಲಿ ಆರಂಭವಾಗಿರುವ ಜಾತ್ರೋತ್ಸವದಲ್ಲಿ ಅಸ್ಪøಶ್ಯತೆ ನಡೆದಿದೆ ಎಂದು ಬಹುಜನ ವಿದ್ಯಾರ್ಥಿ ಸಂಘ ಆರೋಪಿಸಿದ ಹಿನ್ನೆಲೆಯಲ್ಲಿ ಶಿರಂಗಾಲದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಎಲ್ಲಾ ಕೋಮಿನ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಗ್ರಾಮದಲ್ಲಿ ನಡೆಯುವ ಆಚರಣೆಗಳು ಸಮಾಜದ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಲ್ಲಿ ಯಾವದೇ ಅಸ್ಪøಶ್ಯತೆ ಕಂಡುಬಂದಿಲ್ಲ. ಆದರೂ ಸಂಘಟನೆಗಳು ಆರೋಪ ಮಾಡುತ್ತಿವೆ. ಇದರಿಂದ ಸಮಾಜದಲ್ಲಿ ಶಾಂತಿ ಕದಡುವಂತೆ ಆಗಿದೆ. ಎಲ್ಲರೂ ಒಗ್ಗಟ್ಟಿನಿಂದ ಗ್ರಾಮ ದೇವತೆ ಉತ್ಸವ ಆಚರಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಡಿವೈಎಸ್‍ಪಿ ಸಂಪತ್‍ಕುಮಾರ್ ಮಾತನಾಡಿ, ಗ್ರಾಮದಲ್ಲಿ ನಡೆಯುವ ಹಬ್ಬ-ಹರಿದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ. ರಾತ್ರಿ ವೇಳೆ ಹಬ್ಬ ನಡೆಯುವದರಿಂದ ಎಸ್.ಪಿ. ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.
ದಲಿತ ಮುಖಂಡ ರಾಜು ಮಾತನಾಡಿ, ಶಿರಂಗಾಲದಲ್ಲಿ ಯಾವದೇ ರೀತಿಯಲ್ಲಿ ಅಸ್ಪøಶ್ಯತೆ ಪ್ರಕರಣಗಳು ನಡೆದಿಲ್ಲ. ಈ ಬಗ್ಗೆ ಸಂಘಟನೆಗಳ ಆರೋಪ ಸತ್ಯಕ್ಕೆ ದೂರವಾಗಿದೆ. ಎಲ್ಲಾ ವರ್ಗದವರೂ ಗ್ರಾಮ ದೇವತೆ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ ಎಂದರು.
ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಎಸ್.ಎಸ್ ಚಂದ್ರಶೇಖರ್ ಮಾತನಾಡಿ, ಶ್ರಿ ಮಂಟಿಗಮ್ಮ ದೇವಿ ಇಡೀ ಗ್ರಾಮದ ದೇವತೆ. ಯಾವದೇ ಕೋಮಿಗೆ ಸೇರಿದುದಲ್ಲ. ಕೆಲವು ಸಂಘಟನೆಗಳು ಕೋಮುಗಳ ನಡುವೆ ಬಿರುಕು ಮೂಡಿಸುವ ಕೆಲಸ ಮಾಡುತ್ತಿವೆ ಎಂದ ಆರೋಪಿಸಿದರು.
ತಾ.ಪಂ. ಸದಸ್ಯ ಎನ್.ಎಸ್. ಜಯಣ್ಣ, ದೇವಾಲಯ ಸಮಿತಿ ಕಾರ್ಯದರ್ಶಿ ಸಿ.ಎನ್. ಲೋಕೇಶ್, ದಲಿತ ಮುಖಂಡ ಶ್ರೀನಿವಾಸ್ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್, ಸದಸ್ಯ ವೀರಭದ್ರಪ್ಪ, ವೃತ್ತನಿರೀಕ್ಷಕ ಖ್ಯಾತೇ ಗೌಡ, ಠಾಣಾಧಿಕಾರಿ ಮಹೇಶ್, ಮುಖಂಡರಾದ ವೇಲಯ್ಯ, ಶ್ರೀನಿವಾಸ್, ಪ್ರಕಾಶ್ ಮತ್ತಿತರರು ಇದ್ದರು.