ಸೋಮವಾರಪೇಟೆ, ಮಾ. 10: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಅನ್ಯಾಯವೆಸಗಲಾಗುತ್ತಿದೆ ಎಂದು ತಾಲೂಕು ಲಂಚಮುಕ್ತ ವೇದಿಕೆ ಅಧ್ಯಕ್ಷ ಎಸ್. ಸುಬ್ರಮಣಿ ಹಾಗೂ ಗಾಂಧಿನಗರದ ಹಮೀದ್ ಅವರುಗಳು ತಹಶೀಲ್ದಾರ್ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸರ್ಕಾರದಿಂದ ಬಿಪಿಎಲ್ ಕಾರ್ಡ್ದಾರರ ಕುಟುಂಬ ಸದಸ್ಯರಿಗೆ ತಲಾ 5 ಕೆ.ಜಿ. ಅಕ್ಕಿ ವಿತರಣೆಯಾಗಬೇಕು. ಅದರಂತೆ ಸರ್ಕಾರದಿಂದ ಅಕ್ಕಿ ಬಿಡುಗಡೆಯಾಗಿದ್ದರೂ ಗಾಂಧಿನಗರದ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರಿಗೆ ವಿತರಿಸದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಿಪಿಎಲ್ ಕುಟುಂಬವಾಗಿರುವ ಹಮೀದ್ ಅವರ ಮನೆಯಲ್ಲಿ 5 ಜನರಿದ್ದು, ತಲಾ ಒಬ್ಬರಿಗೆ 5 ಕೆ.ಜಿ.ಯಂತೆ ಒಟ್ಟು 25 ಕೆ.ಜಿ. ಅಕ್ಕಿಯನ್ನು ವಿತರಿಸಬೇಕು. ಆದರೆ ನ್ಯಾಯಬೆಲೆ ಅಂಗಡಿ ಮಾಲೀಕ 5 ಕೆ.ಜಿ. ಅಕ್ಕಿಯನ್ನು ವಿತರಿಸಿ 20 ಕೆ.ಜಿ. ಅಕ್ಕಿ ಗುಳುಂ ಮಾಡಿದ್ದಾನೆ. ಹೆಚ್ಚಿನ ಬಡವರಿಗೆ ಇದೆ ರೀತಿ ಅನ್ಯಾಯವಾಗುತ್ತಿದ್ದು, ಕೂಡಲೇ ಮಾಲೀಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.