ಗೋಣಿಕೊಪ್ಪಲು, ಮಾ. 10: ಕೊಡಗು ಜಿಲ್ಲಾ ಬಲಿಜ ಸಮಾಜ, ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಬಲಿಜ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ 104 ಗ್ರಾ.ಪಂ. ಮಟ್ಟದಲ್ಲಿ ಬಲಿಜ ಜನಾಂಗದ ಸಮಗ್ರ ಅಂಕಿ-ಅಂಶವನ್ನು ಕಲೆ ಹಾಕುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ತಾ. 12 ರಂದು ಬಲಿಜ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಪೂರ್ವಭಾವಿ ಸಿದ್ಧತಾ ಸಭೆ ಬೆಕ್ಕೆಸೊಡ್ಲೂರು ದೊಡ್ಡ ಮನೆಯಲ್ಲಿ ನಡೆದಿದ್ದು, ತಾ.12 ರಂದು ಪೂರ್ವಾಹ್ನ 11 ಗಂಟೆಗೆ ಊರಿನ ಬಲಿಜ ಪ್ರಮುಖರು ಹಾಗೂ ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲಾ ಉಪಾಧ್ಯಕ್ಷ ಪಾಪಯ್ಯ ನಾಯ್ಡು ಅವರು ರಾಜ್ಯ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಬಲಿಜ ಸಮಾಜದಿಂದಲೇ ಮಾಡುತ್ತಿರುವ ಗಣತಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಮೈಸೂರು ಶ್ರೀ ಯೋಗಿನಾರಾಯಣ ಯತೀಂದ್ರರ ಬಣಜಿಗ, ಬಲಿಜ ಸಂಘದ ನಿರ್ದೇಶಕ ಎನ್. ಹೇಮಂತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಟಿ.ಎಲ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವೀರಾಜಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಎಸ್.ಕೆ. ಗಣೇಶ್ ನಾಯ್ಡು, ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಬಾಲಕೃಷ್ಣ ಮತ್ತು ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಬೆಕ್ಕೆಸೊಡ್ಲೂರುವಿನಲ್ಲಿ 8 ಮನೆಗಳಿಂದ 25 ಕ್ಕೂ ಅಧಿಕ ಸದಸ್ಯರಿದ್ದು ಪ್ರತಿಯೋರ್ವರ ಸಮಗ್ರ ಮಾಹಿತಿಯನ್ನು ಗಣತಿ ಸಂದರ್ಭ ಪರಿಗಣಿಸಲಾಗುತ್ತದೆ. ಕೊಡಗು, ಮೈಸೂರು, ಬೆಂಗಳೂರು ಒಳಗೊಂಡಂತೆ ಸುಮಾರು 60ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ತಾಲೂಕಿಗೆ ತಲಾ 9 ಮಂದಿಯಂತೆ ಕ್ಷೇಮನಿಧಿ ಜಿಲ್ಲಾ ಸಮಿತಿ ಸಂಚಾಲಕ ಮತ್ತು ತಾಲೂಕು ಸಮಿತಿ ಸಂಚಾಲಕರನ್ನು ನೇಮಕ ಮಾಡಲಾಗುವದು ಎಂದು ತಿಳಿಸಿದ್ದಾರೆ. ಬೆಕ್ಕೆಸೊಡ್ಲೂರು ಗ್ರಾಮದ ಬಲಿಜ ಬಾಂಧವರೊಂದಿಗೆ ಸಾಮೂಹಿಕ ಭೋಜನ ಕೂಟ ಏರ್ಪಡಿಸಲಾಗಿದ್ದು ಊರಿನ ಪ್ರಮುಖರಾದ ಪಾಪಯ್ಯ ನಾಯ್ಡು, ಟಿ.ಸಿ. ಶ್ಯಾಮಲಾ, ತಾಲೂಕು ಬಲಿಜ ಸಮಾಜ ಕಾರ್ಯದರ್ಶಿ ಟಿ.ಆರ್. ಗಣೇಶ್ ಹಾಗೂ ಗ್ರಾಮದ ಬಲಿಜ ಪ್ರಮುಖರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಹಿರಿಯರಾದ ಟಿ.ಆರ್. ರಾಮಕೃಷ್ಣ, ಟಿ.ವಿ. ಶ್ರೀನಿವಾಸ್, ಟಿ.ಸಿ. ಶ್ಯಾಮಲಾ, ಟಿ.ಎ. ಪಾಪಯ್ಯ, ಟಿ.ಆರ್. ಗಣೇಶ್, ಟಿ.ಎಸ್. ಶಾರದಾ ಹಾಗೂ ಟಿ.ಪಿ. ರೂಪಾ ಪಾಲ್ಗೊಂಡಿದ್ದರು.