ಮಡಿಕೇರಿ, ಮಾ. 10: ಗ್ರಾಮಾಂತರ ಪ್ರದೇಶದ ಅನಿಲ ಪಡಿತರ ಚೀಟಿಗಳಿಗೆ ಸೀಮೆಎಣ್ಣೆ ವಿತರಿಸುವ ಬಗ್ಗೆ ಹಾಗೂ ಹೊಸದಾಗಿ ಆನ್‍ಲೈನ್‍ನಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಮತ್ತು ಮಡಿಕೇರಿ ನಗರದಲ್ಲಿ ಹೊಸದಾಗಿ ಪಡಿತರ ಚೀಟಿ ಕೆಲಸ ಕಾರ್ಯ ನಿರ್ವಹಿಸಲು ಫ್ರಾಂಚೈಸಿ ತೆರೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಗ್ರಾಮಾಂತರ ಪ್ರದೇಶದ ಅನಿಲ ಹೊಂದಿರುವ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 1 ಲೀಟರ್ ಸೀಮೆಎಣ್ಣೆ ವಿತರಣೆ ಮಾಡಲು ಸರ್ಕಾರ ಆದೇಶಿಸಿದ್ದು, ಸೀಮೆಎಣ್ಣೆ ಪಡೆಯಲು ಇಚ್ಚಿಸುವ ಪಡಿತರ ಚೀಟಿದಾರರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯೊಂದಿಗೆ ಭೇಟಿ ನೀಡಿ ನೋಂದಾವಣೆ ಮಾಡಿಕೊಳ್ಳಲು ಕೋರಿದೆ. ನೋಂದಣಿ ಮಾಡಿಕೊಂಡ ಪಡಿತರ ಚೀಟಿಗಳಿಗೆ ಮಾರ್ಚ್ ಮಾಹೆಯಿಂದ ಸೀಮೆಎಣ್ಣೆ ವಿತರಿಸಲಾಗುವದು.
2017ರ ಫೆಬ್ರವರಿ ಮಾಹೆಯಲ್ಲಿ ಈವರೆಗೆ ಆಧಾರ್ ಸಂಖ್ಯೆ ನೀಡದಂತಹ ಪಡಿತರ ಚೀಟಿಗಳಿಗೆ ಮತ್ತು ಪಡಿತರ ಚೀಟಿಯಲ್ಲಿರುವ ಸದಸ್ಯರಿಗೂ ಅಕ್ಕಿಯನ್ನು (ಒಬ್ಬರಿಗೆ 5 ಕಿಲೋದಂತೆ) ವಿತರಣೆ ಮಾಡಲಾಗಿದೆ. ಹೆಚ್ಚುವರಿ ಅಕ್ಕಿಯನ್ನು ಪಡೆಯದವರು ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಅಕ್ಕಿಯನ್ನು ಪಡೆಯಲು ಈ ಮೂಲಕ ತಿಳಿಸಿದೆ.
ಸರ್ಕಾರ ಹೊಸ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ನೀಡಲು ಈಗಾಗಲೇ ಆದೇಶ ನೀಡಿದ್ದು, ಅರ್ಹ ಫಲಾನುಭವಿಗಳು ಯಾವದೇ ಖಾಸಗಿ ಕಂಪ್ಯೂಟರ್ ಸೆಂಟರ್‍ಗಳಲ್ಲಿ ಅಥವಾ ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಪಡಿತರ ಚೀಟಿಗಳ ಕೆಲಸವನ್ನು ನಿರ್ವಹಿಸುತ್ತಿರುವ ಬಯೋ ಕೇಂದ್ರಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಆಯಾಯ ಗ್ರಾಮ ಪಂಚಾಯಿತಿಯ ಕಚೇರಿಗಳಲ್ಲಿ ಮತ್ತು ಪಡಿತರ ಚೀಟಿ ಕೆಲಸ ನಿರ್ವಹಿಸುತ್ತಿರುವ ಬಯೋ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಆಧಾರ್ ಕಾರ್ಡ್‍ನ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಗಳನ್ನು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಆಯಾಯ ಗ್ರಾಮ ಪಂಚಾಯಿತಿಗಳಿಗೆ ಅರ್ಜಿಗಳನ್ನು ಶಿಫಾರಸ್ಸಿನೊಂದಿಗೆ ಹಿಂದಿರುಗಿಸಬೇಕಾಗುತ್ತದೆ. ಈ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಪಿ.ಡಿ.ಓ.ಗಳು ಬೆಂಗಳೂರಿನ ಪಡಿತರ ಚೀಟಿಗಳ ಮುದ್ರಣಾ ಕೇಂದ್ರಕ್ಕೆ ಆನ್‍ಲೈನ್‍ನ ಮೂಲಕ ಕಳುಹಿಸಿದ ನಂತರ ಹೊಸ ಪಡಿತರ ಚೀಟಿ ಮುದ್ರಣಗೊಂಡು ಸ್ಪೀಡ್ ಪೋಸ್ಟ್ ಮೂಲಕ 15 ದಿನಗಳ ನಂತರ ಅರ್ಜಿದಾರರ ಮನೆಗೆ ಕಳುಹಿಸಲ್ಪಡುತ್ತದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.
ಕೇಂದ್ರ ತೆರೆಯಲು ಆಹ್ವಾನ
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪಡಿತರ ಚೀಟಿಗಳ ಕೆಲಸ ಕಾರ್ಯಗಳು, ಆಹಾರ ಧಾನ್ಯಗಳ ಕೂಪನ್ ಡೌನ್‍ಲೋಡ್ ಮತ್ತು ಅಪ್‍ಲೋಡ್ ಮಾಡುವ ಕೆಲಸಗಳನ್ನು ನಿರ್ವಹಿಸಲು ಆಸಕ್ತರಿದ್ದಲ್ಲಿ ಉಪ ನಿರ್ದೇಶಕರ ಕಚೇರಿ, ಆಹಾರ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಚೇರಿಯಿಂದ ಪಡೆಯಬೇಕು. ಕಂಪ್ಯೂಟರ್ ಬಾರ್‍ಕೋಡ್, ಬಯೋಮೆಟ್ರಿಕ್ ಡಿವೈಸ್ ಪ್ರಿಂಟರ್ ಮುಂತಾದ ಸಾಮಗ್ರಿಗಳು ಹೊಂದಿರಬೇಕು. 100 ರೂ. ಛಾಪ ಕಾಗದದಲ್ಲಿ ಕರಾರು ಪತ್ರ ಮಾಡಬೇಕು. ಉಪನಿರ್ದೇಶಕರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ 1,000 ರೂ. ಡಿ.ಡಿ.ಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 08272-229457 ಈ ಸಂಖ್ಯೆಗೆ ಕರೆ ಮಾಡಬಹುದು ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.
“ರಾಷ್ಟ್ರೀಯ ಯುವ ಪಡೆ(ದಳ)”
ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು ಯುವಕ/ಯುವತಿಯರಿಗಾಗಿ “ರಾಷ್ಟ್ರೀಯ ಯುವ ಪಡೆ(ದಳ)” ಯೋಜನೆಯಡಿ ಯುವಜನರನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು. ಇದರ ಅನ್ವಯ ದೇಶದಾದ್ಯಂತ ಇಪ್ಪತ್ತು ಸಾವಿರ ಯುವಜನರನ್ನು “ರಾಷ್ಟ್ರೀಯ ಯುವ ಪಡೆ” ಪೂರ್ಣ ಪ್ರಮಾಣದಲ್ಲಿ ಎರಡು ವರ್ಷಗಳ ಅವಧಿಗೆ ನಿಯೋಜಿಸಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಸೂಕ್ತ ಗೌರವ ಧನ ವಿಶೇಷ ತರಬೇತಿ ನೀಡಲಾಗುವದು.
ಜಿಲ್ಲೆಯ ಮೂರು ತಾಲೂಕುಗಳಿಂದ 6 ಜನ ಹಾಗೂ ಕಚೇರಿಯ ಕಂಪ್ಯೂಟರ್‍ನಲ್ಲಿ ಕಾರ್ಯನಿರ್ವಹಿಸಲು 2 ಜನ ಸೇರಿದಂತೆ 8 ಜನ ಯುವಕ/ಯುವತಿಯರನ್ನು “ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರನ್ನಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ದಿನಾಂಕ 1.4.2017 ಕ್ಕೆ ಕನಿಷ್ಟ 18 ವರ್ಷದಿಂದ ಗರಿಷ್ಠ 29 ವರ್ಷದೊಳಗಿರಬೇಕು. 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಾಗಿರಬೇಕು. ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಈಗಾಗಲೇ ರಾಷ್ಟ್ರೀಯ ಸ್ವಯಂ ಸೇವಕರಾಗಿ ಹಿಂದಿನ ಯೋಜನೆಗಳಲ್ಲಿ ಸೇವೆ ಸಲ್ಲಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಯುವಕ/ಯುವತಿ/ಮಹಿಳಾ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವದು. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್.ಸಿ.ಸಿ.ಯಲ್ಲಿ ಪಾಲ್ಗೊಂಡಿರುವವರಿಗೆ ಆದ್ಯತೆ ಇದೆ. ನಿಯಮಾನುಸಾರ ಯುವತಿಯರಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ಇದೆ. ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ವಿಶೇಷ ಆದ್ಯತೆ ಇದೆ. ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರ ಅವಧಿ ಎರಡು ವರ್ಷಗಳು ಮಾತ್ರ. ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಮಾಹೆಯಾನ ರೂ. 5 ಸಾವಿರ ಗೌರವಧನ ನೀಡಲಾಗುವದು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಯ್ಕೆ ಸಮಿತಿಯು ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿ ಆಯ್ಕೆಯನ್ನು ಘೋಷಿಸಲಿದೆ. ಈ ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಲು ಇಚ್ಚಿಸುವ ಯುವಕ/ಯುವತಿಯರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರೂ ಯುವ ಕೇಂದ್ರ, 2ನೇ ಮಹಡಿ, ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡ, ಹೊಸ ಬಡಾವಣೆ, ಮಡಿಕೇರಿ 571201 ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು ಅಥವಾ ಓ.ಙ.ಏ.Web siಣe ತಿತಿತಿ.ಟಿಥಿಞs.oಡಿg ಆoತಿಟಿ ಐoಚಿಜ ಮಾಡಿಕೊಂಡು ತಾ. 18 ರ ಸಂಜೆ 5 ಗಂಟೆಯ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ 08272-225470 ನ್ನು ಸಂಪರ್ಕಿಸಬಹುದು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಿಳಿಸಿದ್ದಾರೆ.