ಕೂಡಿಗೆ, ಮಾ. 10: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ರೇಷ್ಮೆ ಕೃಷಿ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರಾಣದ ತಳಹಂತದ ಕಾಮಗಾರಿಯು ತೀರಾ ಕಳಪೆ ಯಾಗಿದೆ ಎಂಬ ಆರೋಪವಿದೆ.

ಈ ವಿಷಯವಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾ.ಪಂ. ಸದಸ್ಯರುಗಳು ಶಾಸಕರ ಗಮನಕ್ಕೆ ತಂದು; ಈ ಕ್ಷೇತ್ರಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಅವರು ನಿರ್ಮಾಣ ಹಂತದಲ್ಲಿರುವ ರೂ. 12 ಕೋಟಿ ವೆಚ್ಚದ ಕಾಮಗಾರಿ ವೀಕ್ಷಿಸಿದರು.

ಇದೀಗ ಸಂಬಂಧÀಪಟ್ಟ ಇಲಾಖೆ ಮೇಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಸಂದರ್ಭ ಸ್ಥಳದಲ್ಲಿ ಗುಣಮಟ್ಟ ಪರೀಕ್ಷಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದವರು ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ನೀಡಿರುವದೇನೋ ಸರಿ, ಆದರೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಬಂದಿದೆ ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಧಾನಸಭಾ ಅಧಿವೇಶನದ ಕಲಾಪದ ಸಂದರ್ಭ ಚರ್ಚಿಸಿ ಸರಿಯಾದ ಕ್ರಮಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗುವದು ಎಂದು ಪುನರ್ ಉಚ್ಛರಿಸಿದ್ದಾರೆ.