ನವದೆಹಲಿ, ಮಾ. 11: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ ಭಾರೀ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕ್ಕಾಣಿ ಹಿಡಿಯಲು ಸಜ್ಜಾಗಿದೆ. ಒಂದು ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು, ಇನ್ನೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದತ್ತ ಸಾಗಿದ್ದು ಅತಂತ್ರ ಸ್ಥಿತಿ ಎದುರಾಗಿದೆ.ದೇಶದ ಅತ್ಯಧಿಕ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಿಶಾಲ ರಾಜ್ಯವಾದ ಉತ್ತರಪ್ರದೇಶದಲ್ಲಿ ಬಿಜೆಪಿ ಬಿರುಗಾಳಿಯೋಪಾದಿ ಮುನ್ನುಗ್ಗಿದ್ದು ವಿರೋಧ ಪಕ್ಷಗಳನ್ನು ತಲ್ಲಣಗೊಳಿಸಿ ಅಭೂತಪೂರ್ವ ಬಹುಮತ ಸಾಧಿಸಿದೆ. ಈ ರಾಜ್ಯದ ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ ಶೇ. 80 ಕ್ಕಿಂತಲೂ ಅಧಿಕ ಸ್ಥಾನದೊಂದಿಗೆ ಒಟ್ಟು 325 ಕ್ಷೇತ್ರಗಳಲ್ಲಿ ಜಯ ಗಳಿಸಿ ವಿರೋಧ ಪಕ್ಷÀಗಳ ನಿದ್ದೆಗೆಡಿಸಿದೆ. ಈ ಭಾರೀ ಗೆಲುವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಮೋಡಿ, ರಣ ತಂತ್ರವೇ ಕಾರಣವೆನ್ನಲಾಗಿದೆ. ಮುಖ್ಯಮಂತ್ರಿಯಾಗಿದ್ದ ಸಮಾಜವಾದೀ ಪಕ್ಷದ ಧುರೀಣ ಅಖಿಲೇಶ್ ಯಾದವ್ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸಾಧಿಸಿ ಹೋರಾಟದ ಕಣಕ್ಕಿಳಿದಿದ್ದರೂ ಕೇವಲ 54 ಸ್ಥಾನಗಳಿಗೆ ತೃಪ್ತರಾಗಬೇಕಾಗಿದೆ. ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಬೇಕಾಗಿದೆ. ಮಾಯಾವತಿ ನೇತೃತ್ವದ ಬಿಎಸ್‍ಪಿ ನಗಣ್ಯವೆನ್ನುವಂತೆ ಅತ್ಯಲ್ಪ ಸ್ಥಾನವಾದ 19 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದ್ದು ನೆಲ ಕಚ್ಚುವ ಪರಿಸ್ಥಿತಿಗೆ ಇಳಿದಿದೆ. 5 ಮಂದಿ ಇತರರು ಜಯಗಳಿಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರಾಜ್ಯಪಾಲ ರಾಂ ನಾಯಕ್ ಅವರಿಗೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಾಖಂಡ್ ರಾಜ್ಯದಲ್ಲಿಯೂ ಬಿಜೆಪಿ ಕಾಂಗ್ರೆಸ್‍ನಿಂದ ಅಧಿಕಾರ ಗದ್ದುಗೆ ಕಸಿದುಕೊಂಡು ವಿಜಯದ ನಗೆ ಹೊರಹೊಮ್ಮಿಸಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 57 ಸ್ಥಾನಗಳಲ್ಲಿ ಗೆಲವು ಗಳಿಸಿ ಬಹುಮತ ಸಾಧಿಸಿದೆ. (ಮೊದಲ ಪುಟದಿಂದ) ಕಾಂಗ್ರೆಸ್ ಕೇವಲ 11 ಸ್ಥಾನ ಗಳಿಸುವಲ್ಲಿ ಸಫಲವಾಗಿದೆ. 2 ಕ್ಷೇತ್ರಗಳಲ್ಲಿ ಇತರರು ಗೆದ್ದಿದ್ದಾರೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಪರಾಭವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಇಂದು ರಾಜ್ಯಪಾಲ ಕೃಷ್ಣಕಾಂತ್ ಪಾಲ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಮೇಲಿನ ಈ ಎರಡೂ ರಾಜ್ಯಗಳಲ್ಲಿ ಅಮಾನ್ಯೀಕರಣದ ಬಿಸಿ ಪರಿಣಾಮ ಬೀರಬಹುದೆನ್ನುವ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದ್ದು ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿರುವದು ಸುಸ್ಪಷ್ಟವಾಗಿದೆ.

ಪಂಜಾಬ್‍ನಲ್ಲಿ ಕಾಂಗ್ರೆಸ್ ಆಡಳಿತ

ಪಂಜಾಬ್ ರಾಜ್ಯದಲ್ಲಿ ಶಿರೋಮಣಿ ಅಕಾಲಿದಳ್- ಬಿಜೆಪಿ ಮೈತ್ರಿಕೂಟಕ್ಕೆ ಭಾರಿ ಹೊಡೆತ ಬಿದ್ದಿದೆ. ಮೈತ್ರಿ ಕೂಟವು ಕೇವಲ 18 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿದೆ. ಕಳೆದ 5 ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್‍ಸಿಂಗ್ ಬಾದಲ್ ಅವರು ಇದೀಗ ಅಧಿಕಾರ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಕ್ಯಾ.ಅಮರೀಂದರ್ ಸಿಂಗ್ ಅವರ ಪ್ರಭಾವದಿಂದ ಪಕ್ಷವು 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮುಂದಿನ ಆಡಳಿತ ನಡೆಸಲಿದೆ. ಮುಖ್ಯಮಂತ್ರಿಯಾಗಿ ಅಮರೀಂದರ್ ಸಿಂಗ್ ಅವರು ಆಯ್ಕೆಗೊಳ್ಳಲಿದ್ದಾರೆ. ಕೇಜ್ರಿವಾಲ್ ನೇತೃತ್ವದಲ್ಲಿ ಪಂಜಾಬ್‍ನಲ್ಲಿ ಅಧಿಕಾರದ ಗದ್ದುಗೆಯೇರುವ ಆಪ್ ಪಕ್ಷದ ಆಕಾಂಕ್ಷೆ ಈಡೇರದಿದ್ದು ಪಕ್ಷವು ಕೇವಲ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಅತಂತ್ರ ರಾಜ್ಯಗಳು

ಈ ನಡುವೆ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಗೋವಾದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಇದೀಗ ಒಟ್ಟು 40 ಸ್ಥಾನಗಳ ಪೈಕಿ ಕೇವಲ 13 ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ಇಳಿದಿದೆ. ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಗೆÀದ್ದು ಹೆಚ್ಚಿನ ಸ್ಥಾನ ಪಡೆದಿದ್ದರೂ ಆಡಳಿತ ಚುಕ್ಕ್ಕಾಣಿ ಹಿಡಿಯಲು ಬಹುಮತ ಲಭ್ಯವಾಗಿಲ್ಲ. 10 ಮಂದಿ ಇತರರು ಜಯಗಳಿಸಿದ್ದಾರೆ. ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರ ನೇತೃತ್ವದ ಸರಕಾರಕ್ಕೆ ಭಾರೀ ಪರಾಭವವುಂಟಾಗಿದೆ. ಕೇಂದ್ರ ರಕ್ಷಣಾ ಸಚಿವ ಗೋವಾದ ಮನೋಹರ್ ಪರಿಕ್ಕರ್ ಅವರ ಪ್ರಭಾವಕ್ಕೂ ಈ ಸೋಲಿನಿಂದ ಹಿನ್ನಡೆÀಯುಂಟಾಗಿದೆ. ಆಪ್ ಪಕ್ಷವು ಒಂದೂ ಸ್ಥಾನ ಗಳಿಸಲು ಸಫಲವಾಗಿಲ್ಲ.

ಮಣಿಪುರ ವಿಧಾನಸಭಾ ಒಟ್ಟು 60 ಕ್ಷೇತ್ರಗಳ ಪೈಕಿ ಈ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಇದೀಗ 28 ಸ್ಥಾನಗಳನ್ನು ಪಡೆದಿದ್ದರೂ ಸ್ವತಂತ್ರವಾಗಿ ಅಧಿಕಾರ ಹೊಂದಲು ಸಫಲವಾಗಿಲ್ಲ. ಬಿಜೆಪಿ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಟಿಎಂಸಿ 1 ಹಾಗೂ ಇತರರು 10 ಸ್ಥಾನಗಳನ್ನು ಪಡೆದಿದ್ದಾರೆ. 15 ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಬಿಜೆಪಿ ಇದೀಗ ಲಗ್ಗೆ ಹಾಕಿದ್ದರೂ ಅತಂತ್ರ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯುಂಟಾಗಿದೆ.