ಮಡಿಕೇರಿ, ಮಾ. 11: ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆ ಕಾಮಗಾರಿಯು ಪರಿಪೂರ್ಣಗೊಳ್ಳದ ಹೊರತು ನಗರಸಭೆಯ; ಸಂಬಂಧಪಟ್ಟ ಗುತ್ತಿಗೆದಾರರಿಂದ ನಿರ್ವಹಣಾ ವ್ಯವಸ್ಥೆಗೆ ಸ್ವೀಕರಿಸುವದಿಲ್ಲ ಎಂದು ಖಡಕ್ ಆಗಿ ಪುರಪಿತೃಗಳು ತಿಳಿಸಿದ್ದಾರೆ.ತಾ. 9ರಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ಇತರರು ಖುದ್ದಾಗಿ ಕುಂಡಾಮೇಸ್ತ್ರಿ ಯೋಜನೆ ಸ್ಥಳ ಪರಿಶೀಲಿಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಇವರುಗಳು ಗುತ್ತಿಗೆದಾರರ ಕೆಲಸದ ಬಗ್ಗೆ ಅಸಮಾಧಾನ ಹೊರಗೆಡವಿದರು.

ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಇತg ಸದಸ್ಯರುಗಳು ಯೋಜನೆಯ ಪ್ರಗತಿ ಬಗ್ಗೆ ಉಲ್ಲೇಖಿಸುತ್ತಾ; ಗುತ್ತಿಗೆದಾರರು ಕುಂಡಾಮೇಸ್ತ್ರಿ ಜನ

(ಮೊದಲ ಪುಟದಿಂದ) ಸಂರಕ್ಷಣಾ ಜಾಗದಲ್ಲಿ ಹೊಳೆಗೆ ಅಡ್ಡಲಾಗಿ ಬಾಗಿಲು ಸಹಿತ ತಡೆಗೋಡೆ (ಬ್ಯಾರಲ್) ನಿರ್ಮಿಸದಿರುವ ಕುರಿತು ಬೊಟ್ಟು ಮಾಡಿದರು.

ಈ ಹಿಂದೆ ತಡೆಗೋಡೆ ನಿರ್ಮಾಣ ಕುರಿತು ಒಪ್ಪಿಕೊಂಡಿದ್ದ ಗುತ್ತಿಗೆದಾರರು; ಇದೀಗ ತಾತ್ಕಾಲಿಕವಾಗಿ ಮರಳು ಮೂಟೆ ಇರಿಸಿದ್ದನ್ನು ಕಂಡ ಜನಪ್ರತಿನಿಧಿಗಳು ಸಿಡಿಮಿಡಿಗೊಂಡರು. ಅಲ್ಲದೆ; ಹೊಳೆಯಿಂದ ನೀರು ಸಂಗ್ರಹಾಗಾರಕ್ಕೆ ಅಳವಡಿಸಿರುವ ಮೇಲ್ಸೇತುವೆ ಹಾಗೂ ಇತರ ಕಬ್ಬಿಣ ಸಾಮಗ್ರಿಗಳು ಈಗಾಗಲೇ ತುಕ್ಕು ಹಿಡಿಯುತ್ತಿರುವ ಅಂಶವನ್ನು ಕಂಡು ಅವುಗಳಿಗೆ ಬಣ್ಣ ಬಳಿದು ನವೀಕರಿಸಿಕೊಡದಿದ್ದರೆ ನಗರಸಭೆ ಯೋಜನೆಯನ್ನು ತನ್ನ ಸುಪರ್ದಿಗೆ ಹೊಂದಿಕೊಳ್ಳುವದಿಲ್ಲ ಎಂದು ಮುನ್ಸೂಚನೆ ನೀಡಿದರು.

ಸರಕಾರದಿಂದ ಬಿಡುಗಡೆಗೊಂಡಿರುವ ರೂ. 30 ಕೋಟಿಯಲ್ಲಿ ಈಗಾಗಲೇ ರೂ. 22 ಕೋಟಿಯಷ್ಟು ಹಣ ವ್ಯಯಿಸಲಾಗಿದೆ ಎಂಬ ಗುತ್ತಿಗೆದಾರರ ಹೇಳಿಕೆಗೆ ಅತೃಪ್ತಿ ಹೊರಗೆಡವಿದ ಜನಪ್ರತಿನಿಧಿಗಳು, ಕೆಲಸ ಕಳಪೆಗೊಂಡರೆ ತಾವು ಜವಾಬ್ದಾರರಲ್ಲವೆಂದು ಸೂಚ್ಯವಾಗಿ ಎಚ್ಚರಿಸಿದರು.

ಕಾಮಗಾರಿಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಇಂಜಿನಿಯರ್ ಪ್ರಸಾದ್ ಅವರಿಗೆ ಪುರಪಿತೃಗಳು ಎಚ್ಚರಿಸುತ್ತಾ, ಯೋಜನೆ ಪೂರ್ಣಗೊಳ್ಳದೆ ಹಣ ಪಾವತಿಯಾದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಮುನ್ನೆಚ್ಚರಿಕೆ ನೀಡಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ಮಡಿಕೇರಿ ಜನತೆಗೆ ಶಾಶ್ವತ ನೀರಿಗೆ ಅನುಕೂಲವಾಗುವಂತೆ ಕಾರ್ಯೋನ್ಮುಖರಾಗುವಂತೆ ಈ ವೇಳೆ ಇಂಜಿನಿಯರ್‍ಗೆ ಸೂಚಿಸಿದರು. ಕುಂಡಾಮೇಸ್ತ್ರಿ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಾತ್ಕಾಲಿಕ ಉದ್ಯೋಗಿ ಕೆ.ಎಂ. ಗಣೇಶ್ ಅವರನ್ನು ಇಲ್ಲಿಗೆ ಖಾಯಂ ನೌಕರನಾಗಿ ನೇಮಿಸಿಕೊಳ್ಳುವಂತೆ ವೀಣಾ ಅಚ್ಚಯ್ಯ ನಗರಸಭಾ ಆಡಳಿತಕ್ಕೆ ಸಲಹೆ ನೀಡಿದರು.