ಸಿದ್ದಾಪುರ, ಮಾ. 11: ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಮೊದಲ ಬಾರಿಗೆ ಐ.ಪಿ.ಎಲ್. ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾದ ಬೆನ್ನಲ್ಲೇ ಇದೀಗ ಕೊಡಗು ಚಾಂಪಿಯನ್ಸ್ ಲೀಗ್ 2ನೇ ಆವೃತಿಗೆ ತಯಾರಿ ನಡೆಸಿದ್ದು, ಸಿದ್ದಾಪುರದಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದೆ.ಐ.ಪಿ.ಎಲ್. ಮಾದರಿಯಲ್ಲಿ ಕೆ.ಸಿ.ಎಲ್. 2ನೇ ಆವೃತಿಯು ಏ.15 ರಿಂದ ಆರಂಭಗೊಳ್ಳಲಿದ್ದು, ತಾ. 14 ರಂದು ಆಟಗಾರರ ಬಿಡ್ಡಿಂಗ್‍ಗೆ ತಯಾರಿ ನಡೆದಿದೆ. ಜಿಲ್ಲೆಯ ಸುಮಾರು 250 ಕ್ಕೂ ಹೆಚ್ಚು ಆಟಗಾರರು ಈಗಾಗಲೇ ಬಿಡ್ಡಿಂಗ್‍ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದೆ.ಕ್ರೀಡಾ ಜಿಲ್ಲೆ ಕೊಡಗಿನ ಕ್ರಿಕೆಟ್ ಇತಿಹಾಸದಲ್ಲಿ ವಿಜೇತ ತಂಡಕ್ಕೆ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ನೀಡುವ ಈ ಪಂದ್ಯಾವಳಿ ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಇದೀಗ ಎರಡನೇಯ ಆವೃತ್ತಿಗೆ ಸಕಲ ಸಿದ್ಧತೆಯನ್ನು ಕೈಗೊಂಡಿದೆ.

ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದೆ. ಪ್ರತಿ ತಂಡದಲ್ಲಿ 15 ಆಟಗಾರರನ್ನು ಹೊಂದಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಕೆ.ಸಿ.ಎಲ್. ಸೂಕ್ತ ವೇದಿಕೆಯಾಗಿದೆ. ಪಂದ್ಯಾವಳಿಯಲ್ಲಿ ಕೊಡಗಿನ

(ಮೊದಲ ಪುಟದಿಂದ) ಆಟಗಾರರಿಗೆ ಹೆಚ್ಚು ಅವಕಾಶ ದೊರೆಯುತ್ತಿದೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 1,11,111 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದ್ದು, ರನ್ನರ್ ತಂಡಕ್ಕೆ ರೂ. 55,555 ನಗದು ನೀಡಲಾಗುತ್ತಿದೆ. ಅತಿ ಹೆಚ್ಚು ಅಂಕಗಳಿಸಿದ 4 ತಂಡ ಎಲಿಮಿನೇಟರ್ಸ್ ವಿಭಾಗಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಐ.ಪಿ.ಎಲ್ ಮಾದರಿಯಲ್ಲಿ ಫೈನಲ್ ಪಂದ್ಯಾಟ ನಡೆಯಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆ.ಎಸ್.ಸಿ.ಎ) ಅನುಭವಿ ತೀರ್ಪುಗಾರರು ಹಾಗೂ ಸ್ಕೋರರ್‍ಗಳು ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 8 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವದು ಕೂಡ ಪಂದ್ಯಾವಳಿಯ ವಿಶೇಷತೆಯಾಗಿದೆ.

2ನೇ ಆವೃತಿಯಲ್ಲಿನ ತಂಡಗಳು

ರೆಡ್ ಬ್ಯಾಕ್ಸ್ ಬೋಯಿಕೇರಿ, ಎಫ್.ಜಿ.ಸಿ ಹುಂಡಿ, ಅಯನ್ ಯುನೈಟೆಡ್ ವೀರಾಜಪೇಟೆ, ಪೈನಿಯರ್ ಸ್ಪೋಟ್ರ್ಸ್ ಕ್ಲಬ್ ಸಿದ್ದಾಪುರ, ಡಾಟ್ ಡಾಮಿನೇಟರ್ಸ್ ದುಬಾರೆ, ಟೀಮ್ ಕೂಲ್ ಸಿದ್ದಾಪುರ, ಝಲ್ಲಾ ಕ್ರಿಕೆಟರ್ಸ್ ನೆಲ್ಯಹುದಿಕೇರಿ, ಫೈರ್ ಟೈಗರ್ಸ್ ಸಿದ್ದಾಪುರ, ಟೀಮ್ ಕ್ರಿಯೇಟಿವ್ ಚಾಣಕ್ಯ ಮಡಿಕೇರಿ, ಕೂರ್ಗ್ ಲಯನ್ಸ್ ಸಿದ್ದಾಪುರ, ಎಸ್.ಆರ್.ಎಸ್ ಮೂರ್ನಾಡು, ಟ್ರೆಂಡ್ಸ್ ಕ್ರಿಕೆಟರ್ಸ್ ಗೋಣಿಕೊಪ್ಪಲು, ಮೆಟ್ರೋ ಜಯ ಕೋ ವೀರಾಜಪೇಟೆ, ಫ್ರೆಂಡ್ಸ್ ಕ್ರಿಕೆಟರ್ಸ್ ಕುಶಾಲನಗರ.

ಸೆಲೆಬ್ರೆಟಿಗಳ ಮೆರುಗು

2ನೇ ಆವೃತಿಯ ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಭಾರತ ಹಾಕಿ ತಂಡದ ಸ್ಟಾರ್ ಆಟಗಾರ ಸುನಿಲ್, ಕರ್ನಾಟಕ ರಾಜ್ಯ ರಣಜಿ ತಂಡದ ಆಟಗಾರ ಕೆ.ಬಿ ಪವನ್ ಸೇರಿದಂತೆ ಕನ್ನಡ ಚಿತ್ರರಂಗದ ಕಲಾವಿದರು ಬರುವ ನಿರೀಕ್ಷೆಯಿದೆ ಎಂದು ಕೆ.ಸಿ.ಎಲ್. ಕಾರ್ಯದರ್ಶಿ ಎ.ಎಸ್. ಮುಸ್ತಾಫ ತಿಳಿಸಿದ್ದಾರೆ.