ಮಡಿಕೇರಿ, ಮಾ. 10: ಉತ್ತಮ ಆರೋಗ್ಯ ಸೇವೆ ಒದಗಿಸುವ, ಆಸ್ಪತ್ರೆಯಲ್ಲಿ ಶುಚಿತ್ವ ಹಾಗೂ ಉತ್ತಮ ಪರಿಸರ ಕಾಪಾಡಿಕೊಂಡು ಬಂದಿರುವ ಆಸ್ಪತ್ರೆಗಳಿಗೆ ನೀಡಲಾಗುವ ಕಾಯಕಲ್ಪ ಪ್ರಶಸ್ತಿಯನ್ನು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಯಿತು.ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪ್ರಥಮ) ಹಾಗೂ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ (ಸಮಾಧಾನಕರ) ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ವಿತರಿಸಿದರು.

ಆಸ್ಪತ್ರೆಯಲ್ಲಿನ ಎಲ್ಲಾ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವದರ ಜೊತೆಗೆ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡುವದು ಅತಿ ಮುಖ್ಯವಾಗಿದೆ. ಉತ್ತಮ ಆರೋಗ್ಯ ಸೇವೆ ಒದಗಿಸುವ ಮತ್ತು ನೈರ್ಮಲ್ಯ ಕಾಪಾಡಿಕೊಂಡು ಬರುವ ಆಸ್ಪತ್ರೆಗಳಿಗೆ ಸ್ವಚ್ಛ ಭಾರತ ಅಭಿಯಾನದಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಚೆಟ್ಟಳ್ಳಿ ಹಾಗೂ ಶ್ರೀಮಂಗಲ ಆಸ್ಪತ್ರೆಗಳು ಇತರ ಆಸ್ಪತ್ರೆಗಳಿಗೆ ಮಾದರಿಯಾಗಿದ್ದು, ಆಸ್ಪತ್ರೆಯ ಸುತ್ತಮುತ್ತ ಮರ ಗಿಡಗಳು ಹಾಗೂ ಉತ್ತಮ ಪರಿಸರ ಕಾಪಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ ಮಾತನಾಡಿ, ಕಾಯಕಲ್ಪ ಪ್ರಶಸ್ತಿಯನ್ನು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಡೆದುಕೊಂಡಿದ್ದು, ರೂ. 2 ಲಕ್ಷ ಬಹುಮಾನ ಒಳಗೊಂಡಿದೆ ಎಂದರು. ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಾಧಾನಕರ ಬಹುಮಾನ ಪಡೆದಿದ್ದು, ರೂ. 50 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ, ಡಾ. ನೀಲೇಶ್ ಇತರರು ಇದ್ದರು. ಕಾಯಕಲ್ಪ ಪ್ರಶಸ್ತಿ ಪಡೆದ ಚೆಟ್ಟಳ್ಳಿ ಹಾಗೂ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಶಾಲು, ತಾಂಬೂಲ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಎರಡು ಆಸ್ಪತ್ರೆಗಳ ಸಿಬ್ಬಂದಿಗಳು, ಶುಶ್ರೂಷಕರು ಇತರರು ಇದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಗುಣಮಟ್ಟ ವ್ಯವಸ್ಥಾಪಕ ಮೋನಿಸ್ ಸ್ವಾಗತಿಸಿ, ಶ್ರೀಲತಾ ಸಂಪಾಜೆ ಪ್ರಾರ್ಥಿಸಿ, ಕಿರಣ್ ನಿರೂಪಿಸಿ, ವಂದಿಸಿದರು.