ಮಡಿಕೇರಿ, ಮಾ. 11: ನೆರೆ ರಾಜ್ಯಗಳಿಂದ ಕನ್ನಡ ಭಾಷೆಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿವೆ. ಈ ಬಗ್ಗೆ ಕನ್ನಡಿಗರು ಜಾಗೃತರಾಗ ಬೇಕೆಂದು ಸಾಹಿತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್.ಐ. ಮುನೀರ್ ಅಹ್ಮದ್ ಹೇಳಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಏಕೀಕರಣ-60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ನಾಡು ವಿವಿಧ ರಂಗದಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಇನ್ನೂ ಕೂಡ ಆಡಳಿತದಲ್ಲಿ ಸಂಪೂರ್ಣ ಕನ್ನಡ ಭಾಷೆ ಬಳಕೆ ಯಾಗದಿರುವದು ವಿಷಾದÀನೀಯ. ಕನ್ನಡಿಗರು ತಮ್ಮ ಸ್ಥಾನಮಾನಕ್ಕಾಗಿ, ಉದ್ಯೋಗಕ್ಕಾಗಿ ಪರದಾಡುವದು ಮಾತ್ರ ಶೋಚನೀಯ. ಇದರ ಬಗ್ಗೆ ಕನ್ನಡಿಗರು ಚಿಂತಿಸಬೇಡವೇ ಎಂದು ಪ್ರಶ್ನಿಸಿದರು.

ಖಾಸಗಿ ಶಾಲೆಗಳು ಹಣ ಗಳಿಕೆಯ ಉದ್ದೇಶದಿಂದ ಕೆಲಸ ಮಾಡುತ್ತಿವೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕುವಲ್ಲಿ ಶ್ರಮಿಸುತ್ತಿದೆ. ಕನ್ನಡ ಭಾಷೆ ತಿಳಿದವರಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಅಗಾಧವಾದ ಸಾಹಿತ್ಯ ಭಂಡಾರವಿದೆ. ಸಣ್ಣ ಕಥೆ, ಸಾಹಿತ್ಯಗಳನ್ನು ಓದುವದರ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಸಿ ಚುಮ್ಮಿ ದೇವಯ್ಯ ಮಾತನಾಡಿ, ಸಾಹಿತಿಗಳು, ಕವಿಗಳು, ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರೂ ಕೂಡ ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಭಾಷೆ ಬಗ್ಗೆ ಅಭಿಮಾನವಿದ್ದಲ್ಲಿ ಮಾತ್ರ ಭಾಷೆಯನ್ನು ಬೆಳೆಸಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ್, ಈಗಾಗಲೇ ಕಾಸರಗೋಡು, ವೈನಾಡು ನಮ್ಮ ಕೈ ತಪ್ಪಿ ಹೋಗಿದೆ. ಇದೀಗ ಬೆಳಗಾವಿ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ನಾಡು ನುಡಿಯನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ

(ಮೊದಲ ಪುಟದಿಂದ) ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದ್ದು ಸಾಹಿತ್ಯ, ಕಲೆಗಳ ಮುಖಾಂತರ ನಾಡನ್ನು ಉಳಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ನಾವು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡದ ಬಳಕೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಆಂಗ್ಲ ಭಾಷೆಯಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು, ಇದಕ್ಕೆ ನಾವೇ ಕಾರಣರಾಗುತ್ತಿದ್ದೇವೆ ಎಂದು ವಿಷಾದಿಸಿದರು. ಕನ್ನಡ ಪದಗಳಿಗಿರುವ ಅರ್ಥ, ಮಹತ್ವ, ಇನ್ನಿತರ ಭಾಷೆಗಳಲ್ಲಿ ಕಾಣಸಿಗುವದಿಲ್ಲ. ಕನ್ನಡದಲ್ಲಿ ಕಲಿತವರು ದೇಶವನ್ನಾಳಿದ್ದಾರೆ. ಕನ್ನಡವನ್ನು ಮರೆಯಬಾರದು. ಕನ್ನಡ ಭಾಷೆ ಉಳಿವಿಗಾಗಿ ಎಲ್ಲರೂ ಪರಿಷತ್‍ನೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಹಾಗೂ ಸಮಾಜ ಸೇವಕಿ ಅಂಬೆಕಲ್ಲು ಸುಶೀಲ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಜೆನ್ನಿಫರ್ ಲೋಲಿಟ, ಜಿಲ್ಲಾ ಕಾರ್ಯದರ್ಶಿ ರಮೇಶ್, ತಾಲೂಕು ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ ಮತ್ತಿತರರು ಇದ್ದರು. ಕಸಾಪ ಗೌರವ ಕಾರ್ಯದರ್ಶಿ ದಯಾನಂದ ಕೂಡಕಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಸಾಪ ಸದಸ್ಯೆ ಅನಿತಾ ವಂದಿಸಿ, ವಿದ್ಯಾರ್ಥಿನಿ ಹರಿಣಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಪದಾಧಿಕಾರಿ ಚೋಕಿರ ಅನಿತಾ ದೇವಯ್ಯ ವಂದಿಸಿದರು.