ಸೋಮವಾರಪೇಟೆ, ಮಾ. 10: ಸುಮಾರು 300 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಸಮೀಪದ ಮಸಗೋಡು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ರೂ. 40 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಡೆಯುತ್ತಿದ್ದು, ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಮೇ ತಿಂಗಳಿನಲ್ಲಿ ದೇವಾಲಯದ ಲೋಕಾರ್ಪಣೆ ನಡೆಯಲಿದೆ.
ಮಸಗೋಡು ಗ್ರಾಮದ ನಿಸರ್ಗ ಮಡಿಲಿನಲ್ಲಿರುವ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದ್ದು, ಇದೀಗ ಗ್ರಾಮಸ್ಥರುಗಳ ಪರಿಶ್ರಮದಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ದೇವಾಲಯದ ಮುಂದೆ ಬೃಹತ್ ಬಿಲ್ವಪತ್ರೆಯ ಮರವೊಂದಿದ್ದು ದೇವಾಲಯಕ್ಕೂ ಅಷ್ಟೇ ವರ್ಷದ ಇತಿಹಾಸವಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಆರಂಭದ ದಿನಗಳಲ್ಲಿ ಹುಲ್ಲಿನ ಮೇಲುಹಾಸು, ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿದ್ದ ದೇವಾಲಯ ಆನಂತರ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆ ಗ್ರಾಮದ ಹಿರಿಯರು ಸೇರಿಕೊಂಡು ಹೆಂಚಿನ ಮಾಡನ್ನು ನಿರ್ಮಿಸುವ ಮೂಲಕ ಜೀರ್ಣೋದ್ಧಾರ ಮಾಡಿದ್ದರು. ಅದೇ ದೇವಾಲಯದಲ್ಲಿ ಪೂಜೆಗಳು ನಡೆದು ಬರುತ್ತಿತ್ತಾದರೂ, ಭಕ್ತರಿಗೆ ಸವಲತ್ತಿನ ಕೊರತೆಯುಂಟಾಗಿತ್ತು.
ಇದರೊಂದಿಗೆ ದೇವಾಲಯದ ಜೀರ್ಣೋದ್ಧಾರದಿಂದ ಗ್ರಾಮ ಸುಭೀಕ್ಷೆ ಎಂದು 2014ರ ಮಾರ್ಚ್ ತಿಂಗಳಲ್ಲಿ ಬಂಟ್ವಾಳದ ಸುಬ್ರಮಣ್ಯ ಭಟ್ ತಂತ್ರಿಗಳು ನಡೆಸಿಕೊಟ್ಟ ತಾಂಬೂಲ ಪ್ರಶ್ನೆಯಿಂದ ತಿಳಿದುಬಂದಿದೆ. ಈ ಪ್ರಕಾರ ಗ್ರಾಮಸ್ಥರು ಹಾಗೂ ಇತರ ದಾನಿಗಳ ಸಹಕಾರದಿಂದ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿ ಈಗಾಗಲೇ ಬಹುತೇಕ ಕಾಮಗಾರಿ ಮುಗಿದಿದೆ.
ಈ ಹಿಂದೆ ವೀರಶೈವ ದೊರೆಗಳು ಕೊಡಗು ಜಿಲ್ಲೆಯನ್ನಾಳಿದ ಇತಿಹಾಸವನ್ನು ಹೇಳುವ ಕೊಡಗು ಇತಿಹಾಸದ ಗೆಜೆಟಿಯರ್ನಂತೆ ಬಾಳೆಹೊನ್ನೂರಿನ ಮಠವೊಂದರ ಶಾಖಾ ಮಠವು ಈ ಮಸಗೋಡು ಗ್ರಾಮದಲ್ಲಿತ್ತೆಂದು ತಿಳಿದು ಬರುತ್ತದೆ. ಇದನ್ನು ಪುಷ್ಠೀಕರಿಸಲು ಗ್ರಾಮದಲ್ಲಿ 19 ಮಾಸ್ತಿಕಲ್ಲು ಹಾಗೂ 21 ವೀರಗಲ್ಲುಗಳು ಇದ್ದವು. ಅವುಗಳಲ್ಲಿ ಸುಮಾರು 10ಕ್ಕಿಂತ ಹೆಚ್ವಿನವುಗಳನ್ನು ಗ್ರಾಮಸ್ಥರು ಸಂರಕ್ಷಿಸಿದ್ದು, ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿರಿಸಿದ್ದಾರೆ.
ದೇವಾಲಯದಲ್ಲಿ ಮೊದಲಿದ್ದ ವಿಗ್ರಹಗಳು ಭಗ್ನಗೊಂಡಿರುವ ಹಿನ್ನೆಲೆಯಲ್ಲಿ ನೂತನವಾಗಿ ಶಿಲಾ ವಿಗ್ರಹಗಳನ್ನು ನಿರ್ಮಿಸಿ, ಪ್ರತಿಷ್ಠಾಪಿಸುವ ಕಾರ್ಯಗಳು ನಡೆಯಬೇಕಿದೆ. ಮೇ 14, 15 ರಂದು ಹಾಸನದ ವೇದ ಘನಪಾಟಿಗಳಾದ ಕೃಷ್ಣಮೂರ್ತಿ ಪಂಡಿತ ಪೌರೋಹಿತ್ಯ ದಲ್ಲಿ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ದೇವಾಲಯದ ಲೋಕಾರ್ಪಣೆ ಕಾರ್ಯ ನಡೆಯಲಿರುವದರಿಂದ ಅಷ್ಟರೊಳಗೆ ಕಾಮಗಾರಿ ಸಂಪೂರ್ಣವಾಗಬೇಕಿದೆ.
ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಲು ಇಚ್ಛಿಸುವ ದಾನಿಗಳು ಕಾವೇರಿ ಗ್ರಾಮೀಣ ಬ್ಯಾಂಕ್, ಸೋಮವಾರ ಪೇಟೆ ಶಾಖೆಯಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಖಾತೆ ಸಂಖ್ಯೆ 13293023357ಗೆ (ಐಎಫ್ಎಸ್ ಕೋಡ್; ಎಸ್ಬಿಎಂವೈ ಒಆರ್ಆರ್ಸಿಕೆಜಿಬಿ) ಜಮೆ ಮಾಡಬಹುದೆಂದು ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ. ಮೂರ್ತಿ ಮನವಿ ಮಾಡಿದ್ದಾರೆ.