ಶಿರಂಗಾಲ, ಮಾ. 11: ಉತ್ತರ ಕೊಡಗಿನ ಅರೆಮಲೆನಾಡು ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಜಾತ್ರೋತ್ಸವ ವಿಜೃಂಭಣೆಯಿಂದ ಜರುಗಿತು.

ಹಾಸನ ಮತ್ತು ಕೊಡಗಿನ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಗ್ರಾಮದ ಕೋಟೆಯ ಗದ್ದುಗೆ ಯಲ್ಲಿ ರಾತ್ರಿ ದೇವಿಗೆ ಸೋಮವಾರಪೇಟೆಯ ಪ್ರಸವ ಕುಮಾರ್ ಅವರು ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆರಭರಣ ಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಗ್ರಾಮದ ಎಸ್.ಎನ್. ಚಂದ್ರಪ್ಪ ನವರು ಹೊತ್ತುಕೊಂಡು ಮೆರವಣಿಗೆ ಮೂಲಕ ಕೊಂಡೊಯ್ದರು.

ದೇವಿಯು ಬನ ಸೇರಿದಾಗ ಹರಕೆ ಹೊತ್ತ ಭಕ್ತಾದಿಗಳು ದೇವಸ್ಥಾನದ ಮುಂಭಾಗದಲ್ಲಿ ಸಿದ್ಧಪಡಿಸಿರುವ ಅಗ್ನಿಕುಂಡ ತುಳಿದು ದೇವರ ದರ್ಶನ ಪಡೆದು ಪುನೀತರಾದರು.

ಇದಕ್ಕೂ ಮುನ್ನ ಹಬ್ಬದ ಅಂಗವಾಗಿ ಗ್ರಾಮದ ಸಂತೆಮಾಳ ಮೈದಾನದಲ್ಲಿ ಏರ್ಪಡಿಸಿದ್ದ ಆಕರ್ಷಕ ಸಿಡಿಮದ್ದು ಪ್ರದರ್ಶನ ಮತ್ತು ಬಾಣ ಬಿರುಸುಗಳ ಚಿತ್ತಾರ ನೋಡುಗರ ಮನಸೂರೆಗೊಳಿಸಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಸಿ.ಎನ್. ಲೋಕೇಶ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಸುಸೂತ್ರವಾಗಿ ನೆರವೇರಿದವು.

ಹಬ್ಬದ ಅಂಗವಾಗಿ ಗ್ರಾಮ ಮತ್ತು ದೇವಿಯ ಬನ ಹಾಗೂ ದೇವಸ್ಥಾನ ವನ್ನು ವಿದ್ಯುದ್ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಜಾತ್ರೆ ಗ್ರಾಮೀಣ ಸಂಸ್ಕøತಿಯನ್ನು ಪ್ರತಿಬಿಂಬಿಸಿತು. ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಸಂಪತ್ ಕುಮಾರ್ ನೇತೃತ್ವದಲ್ಲಿ ಬಿಗಿಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶನಿವಾರ ಬೆಳಿಗ್ಗೆ ದೇವಿಯ ಬನದಲ್ಲಿ ವಿಶೇಷ ಪೂಜೆ ನೆರೆವೇರಿತು. ಅಪಾರ ಭಕ್ತರು ಆಗಮಿಸಿ ದರ್ಶನ ಭಾಗ್ಯ ಪಡೆದು ಪುನೀತರಾದರು. ಊರಿನ ದಾನಿಗಳಾದ ಸುಖೇಶ್, ರವಿ, ವಿವೇಕಾನಂದ ನೇತೃತ್ವದಲ್ಲಿ ಆಗಮಿಸಿದ್ದ ಸಾಹಸ್ರರು ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಿದ್ದರು.