ಮೂರ್ನಾಡು, ಮಾ. 11 : ಅನಾರೋಗ್ಯದಿಂದ ಸಾವನ್ನಪ್ಪಿದ ಅಪರಿಚಿತ ಮಹಿಳೆಯ ಶವ ಸಂಸ್ಕಾರವನ್ನು ಪೊಲೀಸರ ಸಮ್ಮುಖದಲ್ಲಿ ಹಿಂದೂ ಸಹಾಯವಾಣಿ ಸದಸ್ಯರು ಶನಿವಾರ ನಡೆಸಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯನ್ನು ಶುಕ್ರವಾರ ಬೆಳಿಗ್ಗೆ ಆಟೋ ಚಾಲಕರೊಬ್ಬರು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆ ಆರೋಗ್ಯ ಕೇಂದ್ರದಲ್ಲೇ ಮೃತಪಟ್ಟಿದ್ದಳು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹ ಇರಿಸಿ ಮಹಿಳೆ ಕುರಿತು ಮಾಹಿತಿ ದೊರಕದೆ ಶನಿವಾರ ಸಂಜೆ ಮೂರ್ನಾಡು ಪೊಲೀಸರು ಹಿಂದೂ ಸಹಾಯವಾಣಿಗೆ ತಿಳಿಸಿ ಮೃತದೇಹವನ್ನು ಹಿಂದೂ ರುದ್ರಭೂಮಿಯಲ್ಲಿ ಸಂಸ್ಕಾರ ನಡೆಸಿದರು.

ಆಕ್ರೋಶ : ಅಪರಿಚಿತ ಮಹಿಳೆಯ ಶವಸಂಸ್ಕಾರ ನಡೆಸುವಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸ್ಪಂದನೆ ನೀಡಲಿಲ್ಲ. ಅನಾಥ ಶವ, ಅಪರಿಚಿತ ವ್ಯಕ್ತಿಗಳ ಮೃತದೇಹಗಳನ್ನು ಶವಸಂಸ್ಕಾರ ನಡೆಸುವದು ಗ್ರಾಮ ಪಂಚಾಯಿತಿ ಜವಾಬ್ದಾರಿ. ಆದರೆ ಅಪರಿಚಿತ ಮಹಿಳೆಯ ಶವಸಂಸ್ಕಾರ ನಡೆಸುವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಹಾಯವಾಣಿ ಸದಸ್ಯರಾದ ಸುರೇಶ್ ಮುತ್ತಪ್ಪ, ಪುದಿಯೊಕ್ಕಡ ರಮೇಶ್, ದಿನೇಶ್, ಮನೋಜ್, ಈಶ್ವರ, ಅಯ್ಯಪ್ಪ ಅವರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಿನಲ್ಲಿ ಮೂರ್ನಾಡು ಪಟ್ಟಣದಲ್ಲಿ ಮೂರು ಅನಾಥ ಶವಗಳು ಪತ್ತೆಯಾಗಿದ್ದು, ಎಲ್ಲಾ ಶವಗಳ ಸಂಸ್ಕಾರ ಗ್ರಾಮಸ್ಥರಿಂದಲೇ ಆಗಿದೆ. ಆದರೆ ಗ್ರಾ.ಪಂ ಗೆ ಈ ಬಗ್ಗೆ ಮಾಹಿತಿ ಇದ್ದರೂ ಯಾವದೇ ಸ್ಪಂದನೆ ನೀಡುತ್ತಿಲ್ಲವೆಂದು ಆರೋಪಿಸಿರುವ ಪ್ರಮುಖರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.