ಗೋಣಿಕೊಪ್ಪಲು ನಗರದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಈ ಹಿಂದೆ ಎರಡು ಹೊಳೆ ಹರಿಯುತ್ತಿತ್ತು. ಮಾನವನ ಹಸ್ತಕ್ಷೇಪ ಹೆಚ್ಚಾದಂತೆ ಹೊಳೆ ಸಣ್ಣ ತೋಡುಗಳಾಗಿ ಮಾರ್ಪಾಡಾಗುತ್ತಿದೆ. ಹೊಳೆಯ ದಡಗಳು ಅಕ್ರಮ ಕಟ್ಟಡಗಳಿಗೆ ನಿವೇಶನಗಳಾಗುತ್ತಿದೆ. ಕಂದಾಯ ಇಲಾಖೆ, ಸರ್ವೆ ಇಲಾಖೆ ಈ ಬಗ್ಗೆ ಹೊಳೆಯ ವಿಸ್ತೀರ್ಣದ ಕುರಿತು ಈವರೆಗೂ ಸಾರ್ವಜನಿಕರಿಗೆ, ಗ್ರಾ.ಪಂ.ಗೆ ಸಮರ್ಪಕ ಮಾಹಿತಿ ಕೊಡುವದನ್ನೇ ಮರೆತಿದೆ. ಒತ್ತುವರಿ ಜಾಗದಲ್ಲಿ ಉದ್ಯಮಿಗಳ, ಪ್ರಭಾವಿಗಳ ದೊಡ್ಡ ಕಟ್ಟಡಗಳು ಲಂಗು ಲಗಾಮಿಲ್ಲದೆ, ನಿರ್ಮಾಣವಾಗಿವೆ, ನಿರ್ಮಾಣವಾಗುತ್ತಿದೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗಿದೆ. ಗ್ರಾಮ ಪಂಚಾಯಿತಿಯ ಫ್ಲಾಸ್ಟಿಕ್ ಮುಕ್ತ ನಗರ ಘೋಷಣೆ, ವರ್ತಕರ ಸಂಘದ ಸಭೆಗಳು ಫಲಪ್ರದವಾಗದೆ ಅರ್ಥಕಳೆದುಕೊಳ್ಳುತ್ತಿವೆ. ಮಿತಿಮೀರಿದ ಟ್ರಾಫಿಕ್ ಸಮಸ್ಯೆಯಿಂದಲೂ ಬಳಲುತ್ತಿರುವ (ಅ)ಸುಂದರ ನಗರ ಗೋಣಿಕೊಪ್ಪಲಿನಲ್ಲಿ ಸಾರ್ವಜನಿಕ ಬಸ್ ತಂಗುದಾಣವಿಲ್ಲ. ಉತ್ತಮ ಶೌಚಾಲಯವಿಲ್ಲ. ಪರ ಊರಿನ ಮಹಿಳೆಯರಂತೂ ಉದರ ಬಾಧೆ ತೀರಿಸಲು ಸಿಕ್ಕ ಸಿಕ್ಕ ಹೊಟೇಲ್‍ಗೆ ನುಸುಳಬೇಕಾದ ಅನಿವಾರ್ಯತೆ ಸಾಮಾನ್ಯ. ಇಲ್ಲಿನ ಗಲ್ಲಿ ಗಲ್ಲಿಗಳು, ಮಾರುಕಟ್ಟೆ, ಬೈಪಾಸ್ ರಸ್ತೆಗಳು ಬಯಲು ಮೂತ್ರ ವಿಸರ್ಜನೆಯ ತಾಣವಾಗಿದೆ. ಕೀರೆಹೊಳೆ ಹಾಗೂ ದಕ್ಷಿಣ ಭಾಗದ ಕೈಕೇರಿ ತೋಡುಗಳಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದೆ.
ಸೊಳ್ಳೆಗಳ ನಗರವೆಂದೇ ಈಗೀಗ ಅಪಹಾಸ್ಯಕ್ಕೆ ಗುರಿಯಾಗುತ್ತಿರುವ ನಗರದ ಗ್ರಾ.ಪಂ. ಜನಪ್ರತಿನಿಧಿಗಳ ನಡುವೆ ದಿನನಿತ್ಯ ಕಿತ್ತಾಟ, ಪರಸ್ಪರ ಜಗಳವೇ ವಿನಃ ಅಭಿವೃದ್ಧಿ ಮಂತ್ರ ಜಪಿಸುವವರನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಇದೆ. ಒಂದಿಬ್ಬರು ಪ್ರಜ್ಞಾವಂತ ಗ್ರಾ.ಪಂ. ಜನಪ್ರತಿನಿಧಿಗಳು ಇದ್ದರೂ ಅವರ ಮಾತು ಅನುಷ್ಟಾನಕ್ಕೇ ಬರುವದಿಲ್ಲ. ಇನ್ನೂ ಇಲ್ಲಿನ ಪಿ.ಡಿ.ಓ.ಗಳು ಮಾನಸಿಕ ಒತ್ತಡಕ್ಕೆ ಒಳಗಾಗಿ ತಿಂಗಳಾನುಗಟ್ಟಲೆ ರಜೆ ಹಾಕಿ ತೆರಳುವದೇ ಅಧಿಕ. ಈ ಹಿಂದೆ ಇಲ್ಲಿನ ಬಸ್ ಶೆಲ್ಟರ್ (ರೂ. 5 ಲಕ್ಷ ಅನುದಾನ) ಅಳವಡಿಕೆ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿತರ ಆಕ್ರೋಶಕ್ಕೆ ಒಳಗಾದ ಪ್ರಬಾರ ಪಿಡಿಓ ಒಂದು ತಿಂಗಳು ಚಿಕಿತ್ಸೆಗಾಗಿ ರಜೆ ಹಾಕಿ ತೆರಳಿದ್ದನ್ನು ಇಲ್ಲಿ ನೆನೆಯಬಹುದು.
ಹೊಳೆಗೆ ವಿಷಪ್ರಾಶನ!?
ಇಲ್ಲಿನ ಬಹುತೇಕ ಹೊಟೇಲ್ ಗಳಿಗೆ, ಅಂಗಡಿಗಳಿಗೆ ಮಲ-ಮೂತ್ರ ವಿಸರ್ಜನೆಗೆ ಶೌಚಾಲಯಗಳೇ ಇಲ್ಲ. ಎಲ್ಲವನ್ನೂ ಎರಡು ತೋಡುಗಳಿಗೆ ಪೈಪ್ ಲೈನ್, ಸಾರ್ವಜನಿಕ ಚರಂಡಿಗಳ ಮೂಲಕ ಬಿಡಲಾಗುತ್ತಿದೆ. ಕೆಲವರ ಮನೆ ಬಾಗಿಲಿಗೂ ಮತ್ತೊಬ್ಬರ ಶೌಚ ನೀರು ಹರಿದು ಹೋಗುತ್ತಿದೆ!. ಹೊಳೆ ದಡಗಳಿಗೆ ಇಡೀ ನಗರದ ಕಸ ವಿಲೇವಾರಿ ಮಾಡಿ ನಿರಂತರ ಬೆಂಕಿ ಹಚ್ಚಲಾಗುತ್ತಿದೆ. ಹಂದಿ, ಮೇಕೆ, ಕೋಳಿ, ಮೀನು ತ್ಯಾಜ್ಯವನ್ನೂ ಕೀರೆಹೊಳೆ, ಕೈಕೇರಿ ತೋಡಿಗೆ ಬಿಡಲಾಗುತ್ತಿದೆ. ವ್ಯಾಪಾರಿಯೊಬ್ಬರು ಇಂತಹಾ ತೋಡಿನ ನೀರಿನಲ್ಲಿಯೇ ಮೀನು ತೊಳೆದು ಮಾರಾಟ ಮಾಡುತ್ತಿರುವ ಆರೋಪವೂ ವ್ಯಕ್ತವಾಗಿದೆ!. ಇವೆರಡು ತೋಡುಗಳ ನೀರು ಮುಂದೆ ಲಕ್ಷಣ ತೀರ್ಥ ನದಿಗೆ ಸೇರಿ, ಮುಂದೆ ಜೀವನದಿ ಕಾವೇರಿಯನ್ನು ಸೇರುತ್ತದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಯಾವದೋ ಹೇರ್ ಕಟ್ಟಿಂಗ್ ಸಲೂನ್ ಕೂದಲುಗಳು ರಾಶಿಗಟ್ಟಲೆ ತೋಡು ಸೇರುತ್ತಿದೆ. ಒಟ್ಟಿನಲ್ಲಿ ನಗರ ಬೆಳವಣಿಗೆ ಉಸಿರುಗಟ್ಟುವಂತಾಗಿದೆ.
ಕುಡಿಯುವ ನೀರಿಗೆ ಹಾಹಾಕಾರ?
ಗೋಣಿಕೊಪ್ಪಲಿನ ಸಮಗ್ರ ನೀರು ಪೂರೈಕೆ ಇಲ್ಲಿನ ಕೆಲವೇ ಕೆಲವು ಕೊಳವೆ ಬಾವಿಗಳನ್ನು ಅವಲಂಬಿಸಿವೆ. ಆದರೆ, ಇದೀಗ ಮಾರ್ಚ್ ತಿಂಗಳಿನಲ್ಲಿಯೇ ಇಲ್ಲಿನ 16 ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಇನ್ನು ಮೇ ತಿಂಗಳನ್ನು ಎದುರಿಸುವದು ಹೇಗೆ? ಈ ಬಗ್ಗೆ ಇಲ್ಲಿನ ಗ್ರಾ.ಪಂ.ಜನಪ್ರತಿನಿಧಿಗಳು ಯೋಜನೆಯನ್ನೇ ಹಾಕಿಕೊಂಡಿಲ್ಲ. ಯಾವದೇ ಕೊಳವೆ ಬಾವಿಗೆ ಅಥವಾ ತೆರದ ಬಾವಿಗೆ ನೀರೆತ್ತಲು ಮೋಟಾರ್ ಅಳವಡಿಕೆಗೆ ಅವಕಾಶವಿದೆ. ಆದರೆ, ಇಲ್ಲಿ ಗ್ರಾ.ಪಂ.ನಲ್ಲಿಗೆ ಮೋಟಾರು ಅಳವಡಿಸಿಕೊಳ್ಳುತ್ತಿರುವದು ಲಂಗು ಲಗಾಮಿಲ್ಲದೆ ನಡೆಯುತ್ತಿದ್ದರೂ ಸಂಬಂಧಿಸಿದವರು ಕ್ರಮ ಜರುಗಿಸದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ವಾರ್ಡ್ ಪ್ರತಿನಿಧಿಗಳು, ಕೆಲವು ವಾಟರ್ ಮೆನ್‍ಗಳು ಇಂತಹಾ ಕೃತ್ಯದ ಹಿಂದೆ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.
ಕಸ ವಿಲೇವಾರಿ ಘಟಕಕ್ಕೆ ಹಣದ ಕೊರತೆ!?
ಕಳೆದ ಹಲವು ವರ್ಷಗಳಿಂದಲೂ ಉದ್ಧೇಶಿತ ಮೂರು ಗ್ರಾ.ಪಂ.ಗಳ ಕಸ ವಿಲೇವಾರಿ ಘಟಕಕ್ಕೆ ಸೀತಾ ಕಾಲೋನಿಯಲ್ಲಿ 2 ಎಕರೆ ಜಾಗ ಗುರುತಿಸಿ ಆವರಣ ಗೋಡೆ, ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಘಟಕ ಕಾಮಗಾರಿ ಆರಂಭಿಸಲಾಯಿತು. ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆ ಗ್ರಾ.ಪಂ.ಗಳು ತಲಾ ರೂ. 20 ಲಕ್ಷ ಹಣ ನೀಡಬೇಕಿತ್ತು. ಆದರೆ, ಕಳೆದ ಸಾಲಿನಲ್ಲಿ ಗೋಣಿಕೊಪ್ಪಲು ಗ್ರಾ.ಪಂ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರೂ. 20 ಲಕ್ಷ ಅನುದಾನಕ್ಕೆ ಆಸಕ್ತಿ ವಹಿಸದ ಹಿನ್ನೆಲೆ ವರ್ಷಾನುಗಟ್ತಲೆ ವಿಳಂಬವಾಗಿ ಇದೀಗ ಕಸವಿಲೇವಾರಿ ಘಟಕಕ್ಕೆ ಇತ್ತೀಚೆಗೆ ರೂ. 17.50 ಲಕ್ಷ ಅನುದಾನ ನೀಡಿದೆ. ಪೆÇನ್ನಂಪೇಟೆ ಗ್ರಾ.ಪಂ. ಎರಡು ಕಂತಿನಲ್ಲಿ ರೂ. 9.50 ಲಕ್ಷ ಮತ್ತು ರೂ. 2 ಲಕ್ಷ ಒಟ್ಟಾರೆ ರೂ.11.50 ಲಕ್ಷ ನೀಡಿದೆ. ಅರುವತ್ತೊಕ್ಕಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಕಡಿಮೆ ಹಿನ್ನೆಲೆ ಈವರೆಗೆ ಘಟಕ ಕಾಮಗಾರಿಗೆ ರೂ. 9.75 ಲಕ್ಷ ಅನುದಾನ ನೀಡಿರುವದಾಗಿ ಅಧ್ಯಕ್ಷ ತೀತಮಾಡ ಸುಗುಣ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸುಮಾರು ರೂ. 50 ಲಕ್ಷದಲ್ಲಿ ನಡೆಯಬೇಕಾದ ಕಾಮಗಾರಿ ಕುಂಠಿತಗೊಳ್ಳಲು ಅನುದಾನ ವಿಳಂಬ ಕಾರಣ. ಇಡೀ ಎರಡು ಎಕರೆ ಕಸ ವಿಲೇವಾರಿ ಘಟಕ ಅರುವತ್ತೊಕ್ಕಲು ಗ್ರಾ.ಪಂ.ಗೆ ಒಳಪಡುವದರಿಂದ ಅಲ್ಲಿನ ಅಧ್ಯಕ್ಷ ತೀತಮಾಡ ಸುಗುಣ ಅವರಿಗೆ ಸಮಸ್ತ ಉಸ್ತುವಾರಿ ವಹಿಸಲಾಗಿದೆ. ಉದ್ಧೇಶಿತ ಸ್ಥಳದಲ್ಲಿ ಗಿರಿಜನರಿಗೂ ನಿವೇಶನ ನೀಡಿರುವ ಹಿನ್ನೆಲೆ ಸುಮಾರು ರೂ. 15 ಲಕ್ಷ ಐಟಿಡಿಪಿ ಇಲಾಖೆಯ ಅನುದಾನದಲ್ಲಿ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ಸುಮಾರು 5 ಕಿ.ಮೀ. ರಸ್ತೆಗೆ ನಬಾರ್ಡ್ ಅನುದಾನದಲ್ಲಿ ಹಣ ಬಿಡುಗಡೆಗೊಳಿಸಲು ಶ್ರಮಿಸುತ್ತಿರು ವದಾಗಿ ಗೋಣಿಕೊಪ್ಪಲು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭ ಮಾಹಿತಿ ನೀಡಿದರು. ಉತ್ತಮ ಸುಸಜ್ಜಿತ ವಿಶಾಲವಾದ ರಸ್ತೆ ನಿರ್ಮಾಣ ಮಾಡಲಾಗುವದು ಎಂದು ಹೇಳಿದ್ದಾರೆ. ಪೆÇನ್ನಂಪೇಟೆ ಹಾಗೂ ಅರುವತ್ತೊಕ್ಕಲಿನ ತ್ಯಾಜ್ಯ ವಿಂಗಡನಾ ಘಟಕ ಈಗಾಗಲೇ ನಿರ್ಮಾಣ ವಾಗಿದ್ದು, ಗೋಣಿಕೊಪ್ಪಲು ಘಟಕ ನಿರ್ಮಾಣ ಹಂತದಲ್ಲಿದೆ. ಫ್ಲಾಸ್ಟಿಕ್ ತ್ಯಾಜ್ಯ ವಿಂಗಡಿಸುವ ಘಟಕ ಕಾಮಗಾರಿ ಪೂರ್ಣಗೊಂಡಿದೆ. ಅರುವತ್ತೊಕ್ಕಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫ್ಲಾಸ್ಟಿಕ್ ತ್ಯಾಜ್ಯ, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯದ ವಿಂಗಡನೆ ಮಾಡುವ ವಿಧಾನ ಕುರಿತಂತೆ ಗ್ರಾಮಸ್ಥರಿಗೆ ಕರಪತ್ರ ವಿತರಿಸಿ ಜಾಗೃತಿ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ‘ಕ್ಲೀನ್ ಕೂರ್ಗ್ ಇನ್ಸ್‍ಟಿಟ್ಯೂಟ್’ನ ಪಳಂಗಂಡ ಕರುಣ್ ಸುಬ್ಬಯ್ಯ, ಸುನೀಲ್ ನೇತ್ರತ್ವದಲ್ಲಿ ತ್ಯಾಜ್ಯ ವಿಲೇವಾರಿ ವೈಜ್ಞಾನಿಕ ನಿರ್ವಹಣೆ ಕುರಿತು ಚರ್ಚೆ ನಡೆಯುತ್ತಿದೆ. ಫ್ಲಾಸ್ಟಿಕ್ ತ್ಯಾಜ್ಯವನ್ನು ಮೈಸೂರಿಗೆ ಸಾಗಿಸಿ ಪುನರ್‍ಬಳಕೆ (ರೀ ಸೈಕಲ್)ಗೆ ಬಳಸುವ ತೀರ್ಮಾನ ಕೈಗೊಳ್ಳಲಾಗಿದೆ. ಮುಂದೆ ಸುಮಾರು ರೂ. 40 ಲಕ್ಷ ವೆಚ್ಚದ ಫ್ಲಾಸ್ಟಿಕ್ ತ್ಯಾಜ್ಯವನ್ನು ಫೌಡರ್ ಮಾಡುವ ಘಟಕವನ್ನೂ ಉದ್ಧೇಶಿತ ಸೀತಾ ಕಾಲೋನಿಯಲ್ಲಿ ಅಳವಡಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಹಸಿ ತ್ಯಾಜ್ಯ (ಕೊಳೆಯುವ ತ್ಯಾಜ್ಯ) ನಿರ್ವಹಣೆಗೆ ಪಕ್ಕದಲ್ಲಿಯೇ 6 ಅಡಿ ಆಳ ಹಾಗೂ 25 ಅಡಿ ಅಗಲದ ಗುಂಡಿಯನ್ನು ತೆಗೆಯಲಾಗುತ್ತಿದೆ. ಒಟ್ಟಾರೆಯಾಗಿ ಕುಂಟುತ್ತಾ ಸಾಗಿದ ಕಾಮಗಾರಿ ಕೊಂಚ ವೇಗ ಪಡೆದುಕೊಂಡಿದೆ. ಮೂರು ಗ್ರಾ.ಪಂ. ಮಟ್ಟದಲ್ಲಿಯೂ ಕಸ ನಿರ್ವಹಣಾ ಸಮಿತಿಯನ್ನು ರಚಿಸಿ ಹೊಟೇಲ್ ತ್ಯಾಜ್ಯ, ತರಕಾರಿ ಮಾರುಕಟ್ಟೆ ತ್ಯಾಜ್ಯ, ಸಿರಿಂಜ್ ಇತ್ಯಾದಿ ಔಷಧಿ ವಸ್ತುಗಳ ತ್ಯಾಜ್ಯ, ಮಾಂಸ-ಮೀನು ತ್ಯಾಜ್ಯ ಇತ್ಯಾದಿ ಬಗ್ಗೆ ವರ್ತಕರು ಹಾಗೂ ಬಡಾವಣೆ ನಿವಾಸಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಮೂರು ಗ್ರಾ.ಪಂ.ಗಳಿಗೂ ತ್ಯಾಜ್ಯ ವಿಂಗಡಣೆಗೆ ಬಕೆಟ್ ಅಥವಾ ಡ್ರಮ್ ಪೂರೈಸುವ ಉದ್ಧೇಶವಿದೆ ಎಂದು ಕ್ಲೀನ್ ಕೂರ್ಗ್ ನ ಕರುಣ್ ಸುಬ್ಬಯ್ಯ ತಿಳಿಸಿದ್ದಾರೆ.
ಹೊಟೇಲ್ ವರ್ತಕರು ಮತ್ತು ಬಡಾವಣೆ ನಿವಾಸಿಗಳಿಗೆ ಪ್ರತ್ಯೇಕವಾಗಿ ಸ್ವಚ್ಛ ಭಾರತದ ಬಗ್ಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹಣ ಬಗ್ಗೆ ತರಬೇತಿ ನೀಡುವ ಉದ್ಧೇಶವೂ ಇದೆ ಎಂದು ತಿಳಿಸಿದ್ದಾರೆ.
ಕಾಮಗಾರಿ ಪರಿಶೀಲನೆಗೆ ತೆರಳಿದ ಗೋಣಿಕೊಪ್ಪಲು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಸೀತಾ ಕಾಲೋನಿ ಉದ್ಧೇಶಿತ ಕಸ ವಿಲೇವಾರಿ ಘಟಕ್ಕೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಸಹಕಾರ ನೀಡುವದಾಗಿ ತಿಳಿಸಿದ್ದಾರೆ. ಘಟಕವನ್ನು ಈಗಾಗಲೇ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಅವರು ವೀಕ್ಷಣೆ ಮಾಡಿದ್ದು, ತ್ವರಿತ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮೂರು ಗ್ರಾ.ಪಂ. ಮಟ್ಟದ ಕಸವಿಲೇವಾರಿ ಘಟಕದ ಬಗ್ಗೆ ಹಲವು ಸಭೆಗಳನ್ನು ನಡೆಸಿದ್ದು, ಕೊರತೆಯಾಗಿರುವ ಅನುದಾನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ಜಿ.ಪಂ. ಸದಸ್ಯ ಬೋಪಣ್ಣ ಭೇಟಿ ಸಂದರ್ಭ ಅರುವತ್ತೊಕ್ಕಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ, ಪಿಡಿಓ ಶಂಕರ್ ನಾರಾಯಣ, ಗೋಣಿಕೊಪ್ಪಲಿನ ಜಪ್ಪು ಸುಬ್ಬಯ್ಯ, ಕ್ಲೀನ್ ಕೂರ್ಗ್‍ನ ಸುನೀಲ್, ಕರುಣ್ ಸುಬ್ಬಯ್ಯ ಇದ್ದರು.
ಒಟ್ಟಾರೆ ಗೋಣಿಕೊಪ್ಪಲಿನ ಕಸದ ಸಮಸ್ಯೆ ಇತ್ಯರ್ಥಕ್ಕೆ ಇಲ್ಲಿನ ಆಡಳಿತ, ಗ್ರಾ.ಪಂ. ಅಧ್ಯಕ್ಷೆ ಹಾಗೂ ಜನಪ್ರತಿನಿಧಿಗಳು ಶೀಘ್ರ ಸ್ಪಂದನೆ ನೀಡಿದ್ದಲ್ಲಿ ಕಸ ಮುಕ್ತ, ರೋಗ ಮುಕ್ತ ಗೋಣಿಕೊಪ್ಪಲಾಗಿ ಪರಿವರ್ತನೆ ಕಷ್ಟಸಾಧ್ಯವಲ್ಲ.